

ಕಲಬುರಗಿ: ಫಿರೋಜಾಬಾದ್ ಗ್ರಾಮ ಪಂಚಾಯಿತಿಯ ೧೪ ಮತ್ತು ೧೫ನೇ ಹಣಕಾಸಿನಲ್ಲಿ ಲಕ್ಷಾಂತರ ರೂ. ಅವ್ಯವಹಾರವಾಗಿದ್ದು, ಈ ಬಗ್ಗೆ ಆರ್‌ಟಿಐನಲ್ಲಿ ಪ್ರಶ್ನಿಸಿದರೆ ಪಿಡಿಒ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಕೇಳಿದ್ದಕ್ಕೆ ಗ್ರಾಪಂ ಅಧ್ಯಕ್ಷ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಅಬ್ದುಲ್ ಜಾಗೀರದಾರ್ ಆರೋಪಿಸಿದರು. ಸದಸ್ಯರಿಗೆ ಗ್ರಾಪಂ ಸಭೆಯ ನೋಟಿಸ್ ನೀಡಿ, ನಡಾವಳಿಯನ್ನು ಉಲ್ಲೇಖಿಸಿಲ್ಲ. ಸಭೆಯಲ್ಲಿ ನಡಾವಳಿ ಕುರಿತು ಸ್ಪಷ್ಟನೆ ನೀಡಿಲ್ಲ. ಎಲ್ಲರೂ ಕೂಡಿ ಭ್ರಷ್ಟಾಚಾರವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹಲವು ಕಾಮಗಾರಿಗಳ ಪೂರ್ತಿ ಹಣವನ್ನು ನುಂಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಹಿಂದೆ ಇದ್ದ ಪಿಡಿಒ ಹೇರಾಪೇರಿ ಮಾಡಿದ್ದು, ಆ ಕುರಿತು ತನಿಖೆಗೆ ಆಗ್ರಹಿಸಲಾಗಿದೆ. ಆದರೆ ಪ್ರಸ್ತುತ ಪಿಡಿಒ ಅವರು ಯಾವುದೇ ಮಾಹಿತಿ ಇಲ್ಲದೆ ಅಧಿಕಾರವನ್ನು ಪಡೆದುಕೊಂಡು, ಅಧಿಕಾರ ಚಲಾಯಿಸುತ್ತಿದ್ದಾರೆ. ಈ ಕುರಿತು ಪಂಚಾಯತ್ ರಾಜ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.