ಫಾಸ್ಟ್ ಫುಡ್ ಸೆಂಟರ್​ಗಳಿಗೆ ವಲಯ ಗುರುತಿಸಿ

26KWR2
Published on

ಕಾರವಾರ: ಬೀದಿ ಬದಿಯ ಫಾಸ್ಟ್ ಫುಡ್ ಸೆಂಟರ್​ಗಳಿಗೆ ನಿರ್ದಿಷ್ಟ ವಲಯ ಗುರುತಿಸಿ ಗುಣಮಟ್ಟದ ಆಹಾರ ನೀಡುವ ಬಗ್ಗೆ ಕಡ್ಡಾಯ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ಒತ್ತಾಯಿಸಿದರು.

ನಗರದ ಪ್ರೀಮಿಯರ್ ರೆಸಿಡೆನ್ಸಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಬೀದಿ ಬದಿಯ ಗೂಡಂಗಡಿ, ಫಾಸ್ಟ್​ಫುಡ್ ಸೆಂಟರ್​ಗಳು ಅತ್ಯಧಿಕ ಪ್ರಮಾಣದಲ್ಲಿ ತಲೆಎತ್ತುತ್ತಿರುವುದರಿಂದ ರುಚಿ- ಶುಚಿಯ ಆಹಾರ ನೀಡಿದರೂ ಹೋಟೆಲ್​ಗಳಲ್ಲಿ ವ್ಯಾಪಾರವಿಲ್ಲ ದಂತಾಗಿದೆ. ಹಾಗಂತ ನಾವು ಅವುಗಳನ್ನು ನಿಷೇಧಿಸಲು ಒತ್ತಾಯಿಸುತ್ತಿಲ್ಲ. ನಿರ್ದಿಷ್ಟ ವಲಯ ಗುರುತಿಸಿಕೊಡಿ ಎಂಬುದು ನಮ್ಮ ಒತ್ತಾಯ ಎಂದರು.

ಹೋಟೆಲ್​ಗಳು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬಾಲಕಾರ್ವಿುಕರನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಹೇಳಿದರು. ಉದ್ಯಮಿಗಳು ಅನುಭವಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ತರ ಬೇಕು. ಇದಕ್ಕಾಗಿ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುವ ಜತೆಗೆ ಬಲಿಷ್ಠ ಸಂಘನೆಯನ್ನು ರೂಪಿಸಿಕೊಳ್ಳಬೇಕು ಎಂದರು.

ಉಪಾಧ್ಯಕ್ಷ ಪಿ.ಸಿ.ರಾವ್, ಮುಂದಿನ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಹೋಟೆಲ್ ಮತ್ತು ಉಪಹಾರ ಮಂದಿರಗಳ ಮಾಲೀಕರ ಬೃಹತ್ ಸಮ್ಮೇಳವನ್ನು ಮಂತ್ರಾಲಯ ಅಥವಾ ಕೋಟೇಶ್ವರದಲ್ಲಿ ಆಯೋಜಿಸಲಾಗು ವುದು ಎಂದರು. ಕಾರ್ಯದರ್ಶಿ ಮಧುಕರ ಶೆಟ್ಟಿ, ಖಜಾಂಚಿ ಎಂ.ವಿ.ರಾಘವೇಂದ್ರ ಪ್ರಭು, ಕಾರವಾರ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಶ್ಯಾಮಸುಂದರ ಬಸ್ರೂರು, ಕಾರ್ಯದರ್ಶಿ ವಿಜಯ ಶೆಟ್ಟಿ ವೇದಿಕೆಯಲ್ಲಿದ್ದರು. ವಲಯ ಕಾರ್ಯದರ್ಶಿ ಎಚ್.ಎನ್. ಉಮೇಶ ವಂದಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net