‘ಫಸ್ಟ್ ಲವ್’ ಬಗ್ಗೆ ಪತ್ರ ಬರೆಯಿರಿ : ಅದಮ್ಯ ರಂಗಶಾಲೆಯಿಂದ ಪ್ರೇಮ ಪತ್ರ ಅಭಿಯಾನ

mandya chandru
Published on

ಮೈಸೂರು: ತಮ್ಮ ಮೊದಲ ಪ್ರೇಮದ ಸುಮಧುರ ಕ್ಷಣ, ನೆನಪುಗಳನ್ನು ಹಂಚಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ..!

ನಗರದ ಅದಮ್ಯ ರಂಗಶಾಲೆಯು ‘ಫಸ್ಟ್ ಲವ್’ ಎಂಬ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದು, ಈ ಸಂಬಂಧ ಸಾರ್ವಜನಿಕರಿಂದ ‘ಫಸ್ಟ್ ಲವ್’ ಪ್ರೇಮ ಪತ್ರ ಎಂಬ ಅಭಿಯಾನ ಆರಂಭಿಸಿದೆ.

ಅದಮ್ಯ ರಂಗಶಾಲೆಯಲ್ಲಿ ಮೂರು ವರ್ಷಗಳಿಂದ ಅನೇಕ ಭಿನ್ನ, ವಿಭಿನ್ನವಾದ ನಾಟಕಗಳ ಪ್ರಯೋಗವನ್ನು ಮಾಡುತ್ತಾ ಬಂದಿದೆ. ಈ ಬಾರಿ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದೆ. ಎ.ಆರ್.ಮಣಿಕಾಂತ್ ಅವರ ಪ್ರೇಮಪತ್ರಗಳ ಆಧಾರಿತ ‘ಫಸ್ಟ್ ಲವ್’ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ಈ ನಾಟಕದ ಹೆಸರೇ ಹೇಳೋ ಹಾಗೆ ಪ್ರತಿಯೊಬ್ಬರ ಬದುಕಲ್ಲೂ ಫಸ್ಟ್ ಲವ್ ಇದ್ದೆ ಇರುತ್ತೆ. ಹಾಗಾಗಿ, ಸಾರ್ವಜನಿಕರು ತಮ್ಮ ಫಸ್ಟ್ ಲವ್ ಅನುಭವವನ್ನು ನಾಟಕ ತಂಡದ ಜತೆ ಪತ್ರದ ಮೂಲಕ ಹಂಚಿಕೊಳ್ಳಬಹುದಾಗಿದೆ. ಮೊದಲ ಪ್ರೀತಿ ಬಗೆಗಿನ ಸುಮಧುರ ಕ್ಷಣ, ನೆನಪುಗಳನ್ನು ಬರೆದು ‘ಅದಮ್ಯ ರಂಗಶಾಲೆ, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಜಯಲಕ್ಷ್ಮೀಪುರಂ, ಮೈಸೂರು -570012’ ವಿಳಾಸಕ್ಕೆ ಕಳುಹಿಸಬೇಕಿದೆ.

ಹಾಗೆ ಕಳುಹಿಸಿದ ಪತ್ರವನ್ನು ನಾಟಕ ತಂಡವು ನಾಟಕದ ಪ್ರದರ್ಶನದ ದಿನದೊಂದು ಸಾರ್ವಜನಿಕವಾಗಿ ಪ್ರದರ್ಶನ ಮಾಡಲಿದೆ. ಜತೆಗೆ ಅತ್ಯುತ್ತಮ ಅನಿಸಿದ 3 ಪತ್ರ ಬರೆದವರನ್ನು ನಾಟಕ ಪ್ರದರ್ಶನದ ದಿನ ಸನ್ಮಾನಿಸಲಿದೆ ಎಂದು ಅದಮ್ಯ ರಂಗಶಾಲೆ ಸಂಸ್ಥಾಪಕ ಮಂಡ್ಯ ಚಂದ್ರು ತಿಳಿಸಿದ್ದಾರೆ.

ಜಯಲಕ್ಷ್ಮೀಪುರಂನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಆವರಣದಲ್ಲಿ ‘ಫಸ್ಟ್ ಲವ್’ ನಾಟಕ ಪ್ರದರ್ಶನವನ್ನು ಜ.24ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ. ಯುವ ಪ್ರತಿಭಾನ್ವಿತ ನಿರ್ದೇಶಕ ಪ್ರವೀಣ್ ಬೆಳ್ಳಿ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ. ನಾಟಕದಲ್ಲಿ ಅಭಿನಯಿಸುತ್ತಿರುವ ಎಲ್ಲ ಕಲಾವಿದರು ಯುವ ಕಲಾವಿದರು ಹಾಗೂ ಮೊದಲ ಬಾರಿ ಅಭಿನಯವನ್ನು ಮಾಡುತ್ತಿರುವುದು ಮತ್ತೊಂದು ವಿಶೇಷ. ಹೆಚ್ಚಿನ ಮಾಹಿತಿಗೆ ಮೊ: 6362083934 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net