ಫಸಲ್ ಬಿಮಾ ಯೋಜನೆ ಬಳಸಿಕೊಳ್ಳಿ; ತಹಸೀಲ್ದಾರ್ ಕರೆ

28 Nela 2 Meeting
Published on

ನೆಲಮಂಗಲ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರತಿಯೊಬ್ಬ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಸರ್ಕಾರ ವಿವಿಧ ಸೌಲಭ್ಯಗಳನ್ನು ಕುರಿತು ಇತ್ತೀಚೆಗೆ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ರೈತರ ಅನುಕೂಲಕ್ಕೆ ಸಾಕಷ್ಟು ಕೃಷಿ ಯೋಜನೆ ಜಾರಿಗೊಳಿಸಲಾಗಿದೆ. ಅವುಗಳನ್ನು ಸದ್ಬಳಸಿಕೊಂಡು ಅರ್ಥಿಕವಾಗಿ ಸಬಲರಾಗಬೇಕು. ರೈತರು ಬಿತ್ತನೆಯಿಂದ ಕಟಾವು ಮಾಡುವವರೆಗೂ ಸರ್ಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ತಾಲೂಕಿನಾದ್ಯಂತ ಅತಿಹೆಚ್ಚು ರೈತರ ಪಾಲಿಗೆ ಕೃಷಿಯೇ ಜೀವನಾಧಾರವಾಗಿದೆ. ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಅವರೆಲ್ಲರೂ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ರಾಗಿ ಗೋದಾಮಿಗೆ ಜಾಗ ಮಂಜೂರು: ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಆಗುವ ಸಮಸ್ಯೆಯನ್ನು ಮನಗಂಡು ತಾಲೂಕಿನ ಸೋಂಪುರ ಹೋಬಳಿಯ ಎಡೇಹಳ್ಳಿಯಲ್ಲಿ ಸರ್ವೇ ನಂ.61ರಲ್ಲಿ 6.20 ಎಕರೆ ಜಾಮೀನನ್ನು ರಾಗಿ ಖರೀದಿ ಕೇಂದ್ರ ಗೋದಾಮು ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಆದಷ್ಟು ಬೇಗ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಗುಂಡುತೋಪು ಅಭಿವೃದ್ಧಿ: ತಾಲೂಕಿನಾದ್ಯಂತ 53 ಕಂದಾಯ ವೃತ್ತಗಳು ಇದ್ದು, 41 ಗ್ರಾಮಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜು.1ರಂದು ನಿಗದಿಯಾಗಿರುವ ಕಂದಾಯ ದಿನಾಚರಣೆ ಪ್ರಯುಕ್ತ ಗುಂಡುತೋಪು ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಗುಂಡುತೋಪುಗಳನ್ನು ಪಟ್ಟಿ ಮಾಡಲಾಗಿದ್ದು, ಅರಣ್ಯ ಇಲಾಖೆಯ ಸಹಕಾರದಲ್ಲಿ 4,500ಕ್ಕೂ ಹೆಚ್ಚು ಗಿಡಗಳನ್ನು ನಡೆಲಾಗುವುದು ಎಂದು ಮಾಹಿತಿ ನೀಡಿದರು.

ಸೌಲಭ್ಯ ತಲುಪಿಸಲು ವಿಫಲ: ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಕಾಸರಘಟ ್ಟಗಂಗಾಧರ್ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಬೆಳೆ ವಿಮೆ ಹಾಗೂ ಬೆಳೆ ಸಮೀಕ್ಷೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸದಿರುವುದು ಬೇಸರ ತಂದಿದೆ ಎಂದರು.

ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ಬಿತ್ತನೆ ಬೀಜ ತಯಾರಿ ಮಾಡಲು ರೈತರಿಗೆ ತರಬೇತಿ ನೀಡಿದಲ್ಲಿ ಬಿತ್ತನೆ ಬೀಜ ಕೊರತೆಯನ್ನು ನೀಗಿಸಬಹುದು. ಜತೆಗೆ ಸಿರಿಧಾನ್ಯದ ಬಗ್ಗೆ ಪ್ರಚಾರ ಮಾಡುತ್ತಿರುವ ಸರ್ಕಾರ ರಾಗಿ ಉತ್ಪನ್ನಗಳ ಬಗ್ಗೆ ಅತಿಹೆಚ್ಚು ಪ್ರಚಾರ ಮಾಡಬೇಕಿದೆ ಎಂದು ಮನವಿ ಮಾಡಿಕೊಂಡರು. ಜಿಪಂ ಮಾಜಿ ಸದಸ್ಯ ಎಚ್.ಪಿ. ಚಲುವರಾಜು ಮಾತನಾಡಿ, ರೈತರಿಗೆ ಅವಶ್ಯವಿರುವ ಸೌಲಭ್ಯವನ್ನು ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೆಲ ಕಚೇರಿಯಲ್ಲಿ ಮದ್ಯವರ್ತಿಗಳು ಹಾವಳಿ ಹೆಚ್ಚಾಗಿದೆ. ತಾಲೂಕು ಕಚೇರಿಯಲ್ಲಿ ಸಾಕಷ್ಟು ಕಡತಗಳ ಕಾಣೆಯಾಗುತ್ತಿದ್ದು, ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಕೋರಿಕೊಂಡರು. ತಾಪಂ ಇಒ ಮೋಹನ್‌ಕುಮಾರ್, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಸಿದ್ದಪ್ಪ, ನಿರ್ದೇಶಕ ರಾಮಚಂದ್ರಯ್ಯ, ಗುರುರಾಜು, ಕೆಂಪಮ್ಮ, ಜಿಲ್ಲಾಪ್ರತಿನಿಧಿ ಹೊನ್ನಸಿದ್ದಪ್ಪ, ರಾಷ್ಟ್ರೀಯ ಕಿಸಾನ್ ಸಂಘಟನೆ ಉಪಾಧ್ಯಕ್ಷ ಭೀಮಯ್ಯ, ಭಾರತೀಯ ಕಿಸಾನ್ ಸಂಘದ ಗ್ರಾಮಾಂತರ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಪ್ರಾಂತ ಕಾರ್ಯದರ್ಶಿ ಜಯರಾಮಯ್ಯ, ಪ್ರಧಾನ ಕಾರ್ಯದರ್ಶಿ ನಾಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net