ಫಸಲ್ ಬಿಮಾ ಯೋಜನೆ: ನೋಂದಣಿ ಆರಂಭ

crop insurance
Published on

ಮೈಸೂರು: ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದ್ದು, ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಮತ್ತು ಇತರ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಿ ಜಾರಿಗೆ ಸೂಚಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟ: ಭತ್ತ (ನೀರಾವರಿ) ಬೆಳೆಗೆ ಕೆ.ಆರ್. ನಗರ, ತಿ.ನರಸೀಪುರ, ನಂಜನಗೂಡು, ಮೈಸೂರು, ಸರಗೂರು, ಸಾಲಿಗ್ರಾಮ ಮತ್ತು ಎಚ್.ಡಿ. ಕೋಟೆ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ, ರಾಗಿ (ಮಳೆಯಾಶ್ರಿತ) ಬೆಳೆಗೆ ಸರಗೂರು, ಹುಣಸೂರು ಮತ್ತು ಎಚ್.ಡಿ. ಕೋಟೆ ತಾಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ವಿಮೆಗೆ ನೋಂದಾಯಿಸಿಕೊಳ್ಳಬಹುದು.

ಜತೆಗೆ, ಮುಸುಕಿನಜೋಳ (ಮಳೆಯಾಶ್ರಿತ) ಬೆಳೆಗೆ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಹೆಚ್ಚು (ಮಳೆಯಾಶ್ರಿತ) ಬೆಳೆಗೆ ನಂಜನಗೂಡು ತಾಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ರೈತರು ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು.

ಹೋಬಳಿ ಮಟ್ಟ: ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆಯಾಶ್ರಿತ), ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ (ಮಳೆಯಾಶ್ರಿತ), ತೊಗರಿ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ), ಹತ್ತಿ (ಮಳೆಯಾಶ್ರಿತ), ಹೆಸರು (ಮಳೆಯಾಶ್ರಿತ), ಹುರುಳಿ (ಮಳೆಯಾಶ್ರಿತ), ನೆಲಗಡಲೆ (ಮಳೆಯಾಶ್ರಿತ), ಅಲಸಂದೆ (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಜೋಳ (ಮಳೆಯಾಶ್ರಿತ), ಟೊಮ್ಯಾಟೋ, ಅರಿಶಿಣ, ಉದ್ದು (ಮಳೆಯಾಶ್ರಿತ) ಮತ್ತು ಎಲೆಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ರೈತರು ವಿಮೆಗೆ ನೋಂದಾಯಿಸಬಹುದಾಗಿದೆ.

ಪರಿಷ್ಕೃತ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೆ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಆಗ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆ ಐಚ್ಛಿಕವಾಗಿದ್ದು, ಅಧಿಸೂಚಿಸಲಾದ ಬೆಳೆಗಳಿಗೆ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ವಿವರಗಳೊಂದಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಬಹುದಾಗಿದೆ.

ಮಾರ್ಗಸೂಚಿಯನ್ವಯ ಬೆಳೆ ವಿಮೆ ಎಫ್‌ಐಡಿ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಒಂದು ವೇಳೆ ಈ ಸಂಖ್ಯೆಯನ್ನು ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಆಧಾರ್ ಸಂಖ್ಯೆ ಹಾಗೂ ಆರ್‌ಟಿಸಿ ವಿವರ ಸಲ್ಲಿಸಿ ಈ ಸಂಖ್ಯೆಯನ್ನು ಪಡೆಯಬಹುದಾಗಿದೆ.

ಜುಲೈ 31 ವಿಮಾ ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬ್ಯಾಂಕ್‌ಗಳು, ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net