ಫಸಲ್ ಬಿಮಾ ಯೋಜನೆ ಮಾಹಿತಿ ಅಪೂರ್ಣ

28 skp 1
Published on

ಶಿಕಾರಿಪುರ: ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆ ಒಳ್ಳೆಯದಾಗಿದ್ದರು ಕೂಡ ಅದು ಸಮರ್ಪಕವಾಗಿ ರೈತರಿಗೆ ತಲುಪಿಲ್ಲ. 2015ರಿಂದಲೂ ಶೇ.20 ರೈತರಿಗೆ ಬೆಳೆ ವಿಮೆ ವಿವಿಧ ಕಾರಣಗಳಿಂದ ಕೈಸೇರಿಲ್ಲ. ಇದರ ಬಗ್ಗೆ ಸಂಬಂಧಿಸಿದವರು, ಜನಪ್ರತಿನಿಧಿಗಳು ಗಮನಹರಿಸಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟನಗೌಡ ದೋಣಗುಡ್ಡೆ ಹೇಳಿದರು.

ರೈತರಿಗೆ ಬೆಳೆ ವಿಮೆ ಬಗ್ಗೆ ಸೂಕ್ತ ಮಾಹಿತಿ ನೀಡಲು ತಾಲೂಕಿನಲ್ಲಿ ಯಾವುದೇ ಸಂಪರ್ಕ ಕಚೇರಿ ಇಲ್ಲ. ತಾಲೂಕಿಗೊಂದು ಸಂಪರ್ಕ ಕಚೇರಿ ತೆರೆಯುವಂತೆ ವಿಮಾ ಕಂಪನಿಗೆ ಒತ್ತಾಯಿಸಿ ರೈತಸಂಘ ಪ್ರತಿಭಟಿಸಿತ್ತು. ಆದರೂ ಪ್ರಯೋಜನವಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೊಳವೆ ಬಾವಿಗಳಿಗೆ ಬಂಗಾರಪ್ಪ ಉಚಿತ ವಿದ್ಯುತ್ ಪೂರೈಕೆ ಯೋಜನೆ ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲವೂ ಆ ಯೋಜನೆಯನ್ನು ಉಳಿಸಿಕೊಂಡು ಬಂದಿವೆ. ಈಗಿನ ಸರ್ಕಾರವೂ ಅದನ್ನೇ ಮುಂದುವರಿಬೇಕು. ವಿದ್ಯುತ್ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಬಾರದೆಂದು ಆಗ್ರಹಿಸಿದರು.

ಭೂ ಸುಧಾರಣಾ ತಿದ್ದುಪಡಿ ಕಾನೂನಿನಿಂದ ಸಣ್ಣಪುಟ್ಟ ರೈತರನ್ನು ಕೂಡ ಹೆಚ್ಚಿನ ಹಣದಾಸೆ ತೋರಿಸಿ ಉದ್ಯಮಿಗಳು, ಶ್ರೀಮಂತರು, ರಿಯಲ್ ಎಸ್ಟೇಟ್​ನವರು ಜಮೀನು ಖರೀದಿಸಿ ಭೂಮಿ ರಹಿತರನ್ನಾಗಿಸುವ ಅಪಾಯವಿದೆ. ಇದು ರೈತರಿಗೆ ಮಾರಕವಾಗಿದ್ದು ಸರ್ಕಾರ ಇದನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಸೊರಬ ತಾಲೂಕು ರೈತ ಸಂಘದ ಅಧ್ಯಕ್ಷ ಹಾಲಪ್ಪ ಗೌಡ, ಮುಖಂಡರಾದ ಬೇಗೂರು ಶಿವಪ್ಪ, ಬಿಳಕಿ ವೀರಭದ್ರಪ್ಪ, ಅಗ್ರಹಾರ ಮುಚುಡಿ ಬಸವರಾಜಪ್ಪ, ಯಳಗೇರಿ ಮಲ್ಲಯ್ಯ, ಉಡುಗಣಿ ಕೊಟ್ರೇಶ್, ಶಿರಾಳಕೊಪ್ಪ ನವೀದ್ ಇದ್ದರು.

ಎಪಿಎಂಸಿ ಹೊಸ ಕಾನೂನಿನ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ವಿಧಾನಸಭೆಯಲ್ಲಾಗಲಿ, ರೈತ ಮುಖಂಡರ ಜತೆಯಾಗಲಿ ಸರ್ಕಾರ ರ್ಚಚಿಸಿಲ್ಲ. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ರೈತ ವಿರೋಧಿ ಯೋಜನೆ, ಕಾನೂನುಗಳನ್ನು ತಕ್ಷಣ ಕೈ ಬಿಡಬೇಕು.

| ಪ್ಯಾಟಿ ಈರಣ್ಣ, ಸಂಘದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net