ಫಸಲ್ ಬಿಮಾ ನೋಂದಣಿಯಲ್ಲಿ ಪ್ರಥಮ

dcc bank
Published on

ಬೀದರ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿಯಲ್ಲಿ ದೇಶದಲ್ಲೇ ಬೀದರ್ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು.
ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕಿನ 101ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮದೊಂದಿಗೆ ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯರ ವಿಮೆ ಮಾಡಿರುವುದು ರಾಜ್ಯದಲ್ಲೇ ನಮ್ಮ ಪ್ರಥಮ ಪ್ರಯೋಗ ಎನಿಸಿದೆ ಎಂದರು.
ಬ್ಯಾಂಕ್ 4,909 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ಹೂಡಿಕೆಗಳ ಮೊತ್ತ 1238.91 ಕೋಟಿಯಾಗಿದೆ. ರಾಜ್ಯದ 21 ಡಿಸಿಸಿ ಬ್ಯಾಂಕ್ಗಳ ಪೈಕಿ ಕೃಷಿಗಾಗಿ 850 ಕೋಟಿಗೂ ಹೆಚ್ಚು ಅಲ್ಪಾವ ಬೆಳೆ ಸಾಲ ವಿತರಿಸಿದ ನಾಲ್ಕು ಬ್ಯಾಂಕ್ ಗಳಲ್ಲಿ ಬೀದರ್ ಸಹ ಒಂದಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ಜಿಲ್ಲೆಯಲ್ಲಿ 45 ಶಾಖೆಗಳಿದ್ದು, ಈ ಪೈಕಿ 25 ಸ್ವಂತ ಕಟ್ಟಡ ಹೊಂದಿವೆ. ಬ್ಯಾಂಕ್ ಅಡಿ 188 ಪಿಕೆಪಿಎಸ್ ಪೈಕಿ 183 ಸ್ವಂತ ಕಚೇರಿ ಕಟ್ಟಡ ಮತ್ತು ಗೋದಾಮ ಹೊಂದಿದೆ. ಎಲ್ಲ ಪಿಕೆಪಿಎಸ್ಗಳ ಗಣಕೀಕರಣ ಮಾಡಲಾಗಿದೆ. ಸಾಲ ಮತ್ತು ಬಡ್ಡಿ ಮನ್ನಾ ಹಾಗೂ ಬಡ್ಡಿ ಸಹಾಯಧನ, ಪ್ರೋತ್ಸಾಹಧನ ರೂಪದಲ್ಲಿ ಸರ್ಕಾರದಿಂದ 8 ವರ್ಷಗಳಲ್ಲಿ ಜಿಲ್ಲೆ ರೈತರು, ಸ್ವಸಹಾಯ ಗುಂಪಿನ ಸದಸ್ಯರಿಗೆ 1595 ಕೋಟಿ ರೂ. ಬಂದಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಜಿಲ್ಲೆ ರೈತರಿಗೆ 398.25 ಕೋಟಿ ರೂ. ಪರಿಹಾರ ಡಿಸಿಸಿ ಬ್ಯಾಂಕ್ ಮೂಲಕ ನೀಡಲಾಗಿದೆ ಎಂದು ವಿವರಿಸಿದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಹಂದಿಕೇರಾ ಪಿಕೆಪಿಎಸ್ ಅಧ್ಯಕ್ಷ ಗುಂಡೇರಾವ್ ಸಾಟೆ, ರೇಕುಳಗಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಹಚ್ಚೆ ಮಾತನಾಡಿದರು. ಉಪಾಧ್ಯಕ್ಷರಾದ ಎಂಎಲ್ಸಿ ಭೀಮರಾವ್ ಪಾಟೀಲ್, ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಮಹಾತ್ಮಗಾಂ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್, ಹುಮನಾಬಾದ್ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಅಭಿಷೇಕ ಪಾಟೀಲ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಮಂಜುಳಾ ಎಸ್., ಬ್ಯಾಂಕ್ ನಿರ್ದೇಶಕರಾದ ರಾಚಪ್ಪ ಪಾಟೀಲ್, ಅಮರಕುಮಾರ ಖಂಡ್ರೆ, ಬಸವರಾಜ ಹೆಬ್ಬಾಳೆ, ವಿಜಯಕುಮಾರ ಪಾಟೀಲ್, ಜಗನ್ನಾಥರಡ್ಡಿ ಏಖೇಳ್ಳಿ, ಸಂಜಯಸಿಂಗ್ ಹಜಾರಿ, ಶರಣಪ್ಪ ಶಿವಪ್ಪ, ಮಹ್ಮದ್ ಸಲಿಮುದ್ದೀನ್, ಬಸವರಾಜ ಗೋಣೆ, ಶಿವಶರಣಪ್ಪ ತಗಾರೆ, ಪರಮೇಶ್ವರ ಮುಗಟೆ, ಹಣಮಂತರಾವ ಪಾಟೀಲ್, ಸಂಗಮೇಶ ಪಾಟೀಲ್, ಅಶೋಕರಾವ ಗಣಪತರಾವ, ಸಿಇಒ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರಡ್ಡಿ ಏಡಮಲ್ಲೆ, ಚನ್ನಬಸಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net