

ಬೀದರ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೂರು ಸಲ್ಲಿಸಿದ ಜಿಲ್ಲೆ ರೈತರಿಗೆ ಕಡಿಮೆ ಪರಿಹಾರ ಬರುತ್ತಿರುವ ದೂರುಗಳು ಬರುತ್ತಿವೆ. ಹೀಗಾಗಿ ರೈತರ ದೂರುಗಳನ್ನು ಪರಿಶೀಲಿಸಿ ಅರ್ಹರಿಗೆ ವಿಮಾ ಮೊತ್ತ 100ಕ್ಕೆ ನೂರರಷ್ಟು ಪಾವತಿಗೆ ಪರಿಗಣಿಸಬೇಕು ಎಂದು ಕೃಷಿಕ ಸಮಾಜ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಕೋರಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕರೆದಿದ್ದ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ವಿವಿಧೆಡೆ ವಿಮೆ ಕಟ್ಟಿದ ರೈತರಿಗೆ ಬಹಳ ಕಮ್ಮಿ ಪರಿಹಾರ ಬಂದಿದೆ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೂ ತರುವುದಾಗಿ ಹೇಳಿದರು.
ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಯೋಜನೆಯಡಿ ಸಾಮಾನ್ಯ ಶೇ.75, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90 ಸಹಾಯಧನ ಸಿಗಲಿದ್ದು, ರೈತರು ಪಡೆಯಬೇಕು. ಜಿಲ್ಲೆಯ ಕೃಷಿ ಸಮಾಜ ಭವನ ಸಿದ್ಧವಾಗಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗುವುದು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಮಾತನಾಡಿ, ಫಸಲ್ ಬಿಮಾ ಯೋಜನೆ ಮಾರ್ಗಸೂಚಿಯನ್ವಯ ರೈತರು ದೂರು ಸಲ್ಲಿಸಲು ನಾಲ್ಕು ಹಂತಗಳಿವೆ. ಮೊಳಕೆ, ಬೆಳವಣಿಗೆ, ಮಾಗುವ ಮತ್ತು ಕೊಯ್ಲು ಹಂತಗಳಿವೆ. ರೈತರು ಮೊದಲನೇ ಹಂತವಾದ ಮೊಳಕೆಯಲ್ಲಿ ಬೆಳೆ ಹಾನಿಯಾದರೆ ದೂರು ಸಲ್ಲಿಸಿದ್ದಲ್ಲಿ ವಿಮಾ ಮೊತ್ತದ ಶೇ.45ರಿಂದ 55 ಪರಿಗಣಿಸಲಾಗುತ್ತದೆ. ಬೆಳವಣಿಗೆ ಹಂತದ ದೂರಿಗೆ ಶೇ.70ರಿಂದ 75 ವಿಮಾ ಮೊತ್ತ ಪರಿಗಣಿಸಲಾಗುತ್ತದೆ. ಜಿಲ್ಲೆಯ ಹೆಚ್ಚಿನ ರೈತರು ಮೊದಲನೇ ಹಂತದಲ್ಲಿ ದೂರು ಸಲ್ಲಿಸಿದ್ದರಿಂದ ಪರಿಹಾರ ಕಡಿಮೆ ಬಂದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಬಾಬುರಡ್ಡಿ ಪಾಟೀಲ್, ಖಜಾಂಚಿ ರಮೇಶ ಪಾಟೀಲ್, ದತ್ತು ಮೂಲಗೆ, ದಯಾನಂದ ಸ್ವಾಮಿ, ತೋಟಗಾರಿಕೆ ಉಪ ನಿರ್ದೇಶಕ ವಿಶ್ವನಾಥ ಝಿಳ್ಳೆ, ಪಶು ಇಲಾಖೆ ಉಪ ನಿರ್ದೇಶಕ ಡಾ.ನರಸಪ್ಪ ದೇವಗೊಂಡ ಇತರರಿದ್ದರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಸಂಘದ ರಾಜ್ಯ ಪ್ರತಿನಿಯಾಗಿ ಹುಮನಾಬಾದ್ ತಾಲೂಕಿನ ಮಾಡಗೋಳದ ವಿಶ್ವನಾಥ ಪಾಟೀಲ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.