

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ವಿ.ಎನ್. ದೊಡ್ಡಿ ಭಾಗದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದ ಜಮೀನುಗಳಿಗೆ ಮಂಗಳವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ವಿ.ಎನ್. ದೊಡ್ಡಿ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಅಂಚಿನಲ್ಲಿದ್ದು, ಇಲ್ಲಿನ ಜನರು ಹೆಚ್ಚಾಗಿ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಇದೀಗ ಜಮೀನಿನಲ್ಲಿ ರಾಗಿ ಹಾಗೂ ಮುಸುಕಿನ ಜೋಳ ಬೆಳೆದಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಿಂದ ಕಳೆದ ಒಂದು ವಾರದಿಂದ ರಾತ್ರಿ ವೇಳೆ ಜಮೀನುಗಳಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದವು. ಈ ಬಗ್ಗೆ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಪರಿಣಾಮ ಸೋಮವಾರ ರಾತ್ರಿಯೂ ಕಾಡಾನೆಗಳ ಹಿಂಡು ಜಮೀನುಗಳಿಗೆ ಲಗ್ಗೆ ಹಾಕಿ ಫಸಲನ್ನು ನಾಶಪಡಿಸಿದವು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳ ಗಮನಕ್ಕೆ ತಂದರು. ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜ ಅವರು ಅರಣ್ಯಾಧಿಕಾರಿ ಅವರಿಗೆ ತಿಳಿಸಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಬೆಳೆ ಹಾನಿಯಾದ ಜಮೀನುಗಳಿಗೆ ಆರ್‌ಎಫ್‌ಒ ನಿರಂಜನ್ ಹಾಗೂ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಲಗ್ಗೆ ಇಟ್ಟು ಕಟಾವಿಗೆ ಬಂದಿದ್ದ ರಾಗಿ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಆದ್ದರಿಂದ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು. ಹಾಗೆಯೇ ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಇಲ್ಲವೋ ಆನೆ ಕಂದಕವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಆರ್‌ಎಫ್‌ಒ ನಿರಂಜನ್ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.