

ಕಲಬುರಗಿ: ಜಿಲ್ಲೆಯಲ್ಲಿ ದ್ವಿತೀಯ ಪಿಯು ಫಲಿತಾಂಶ ಹೆಚ್ಚಳಕ್ಕೆ ಉಪನ್ಯಾಸಕರು ಶ್ರಮಿಸಬೇಕು. ಮಕ್ಕಳ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು. ಫಲಿತಾಂಶದಲ್ಲಿ ಹಿಂದುಳಿದ ಜಿಲ್ಲೆ ಹಣೆಪಟ್ಟಿ ಅಳಿಸಬೇಕು. ಕಲಿಕಾ ಆಸಕ್ತಿಯಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘದ ಆಶ್ರಯದಲ್ಲಿ ರಮಾಬಾಯಿ ಜಹಾಗೀರದಾರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ (ಆರ್.ಜೆ) ಬುಧವಾರ ಏರ್ಪಡಿಸಿದ್ದ ವಿಷಯಾಧಾರಿತ ಪುನಃಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಅಲ್ಲಾವುದ್ದೀನ್ ಸಾಗರ ಮಾತನಾಡಿ, ಬೋಧನೆಯಲ್ಲಿ ಪ್ರಬುದ್ಧರಾಗಿದ್ದರೆ ಮಕ್ಕಳ ಮನಸ್ಸಿಗೆ ತಲುಪುತ್ತದೆ. ಭಾಷಾ ಬೋಧಕರು ಭಾಷೆಯಲ್ಲಿಯೇ ಮಾತಾಡುವುದು ರೂಢಿಸಿಕೊಳ್ಳಬೇಕು. ಆಗ ಜ್ಞಾನ ಹೆಚ್ಚುತ್ತದೆ ಎಂದರು.
ಆರ್.ಜೆ.ಕಾಲೇಜಿನ ಪ್ರಾಚಾರ್ಯ ಡಾ.ಭುರ್ಲಿ ಪ್ರಹ್ಲಾದ ಮಾತನಾಡಿ, ಕಾಲೇಜಿನ ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳಿಗೆ ಸರಣಿ ಪರೀಕ್ಷೆ, ಮೌಲ್ಯಮಾಪನ, ಬರವಣಿಗೆಯಲ್ಲಿ ತೊಡಗಿಸುವುದು, ಕಲಿಕಾ ಚಟುವಟಿಗೆ ಏರ್ಪಡಿಸಲಾಗುತ್ತಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಉಪನ್ಯಾಸಕರು ತೊಡಗಿಸಿಕೊಂಡರೆ ಯಶಸ್ಸು ದೊರೆಯುತ್ತದೆ ಎಂದರು.
ಸರ್ಕಾರಿ ಪದವಿ ಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸವರಾಜ ಬಿರಾಜದಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಮಲ್ಲಪ್ಪ, ಪ್ರಾಚಾರ್ಯರ ಸಂಘದ ಸಲಹೆಗಾರ ಅರುಣಕುಮಾರ ಪಾಟೀಲ್, ಪ್ರಾಚಾರ್ಯರಾದ ಅಶೋಕ ಶಾಸ್ತಿç, ಶ್ರೀಶೈಲ ಬೋನಾಳ ಇತರರಿದ್ದರು. ಗಣಿತ, ಜೀವಶಾಸ್ತç ಮತ್ತು ಇಂಗ್ಲಿಷ ವಿಷಯದ ಕುರಿತು ಕಾರ್ಯಾಗಾರ ನಡೆಯಿತು. ಸಾರಿಕ ಕೆಂಚಣ್ಣನವರ ಪ್ರಾರ್ಥಿಸಿದರು. ಮಳೇಂದ್ರ ಹಿರೇಮಠ ನಿರೂಪಣೆ ಮಾಡಿದರು. ಕೇದಾರ ದೀಕ್ಷಿತ್ ಸ್ವಾಗತಿಸಿದರು.