ಫಲಿತಾಂಶ ಸುಧಾರಣೆಗೆ ಶಿಕ್ಷಕರ ಸಹಕಾರ ಅವಶ್ಯ: ಡಿಡಿಪಿಐ

2508-Kpl-Ravi-4
Published on

ಕೊಪ್ಪಳ:ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಇಲಾಖೆಯೊಂದಿಗೆ ಶಿಕ್ಷಕರು ಸಹಕರಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘ ವಿಭಿನ್ನ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ಹೇಳಿದರು.


ನಗರದ ಜಿಲ್ಲಾ ನೌಕರರ ಭವನದಲ್ಲಿ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ಬಹುತೇಕ ಸಂಘಟನೆಗಳು ಶಿಕ್ಷಕರ ಬೇಡಿಕೆಗಳ ಬಗ್ಗೆ ಗಮನ ಕೇಂದ್ರೀಕರಿಸುತ್ತವೆ. ಕೊಪ್ಪಳದಲ್ಲಿ ಇಲಾಖೆಯೊಂದಿಗೆ ಫಲಿತಾಂಶ ಸುಧಾರಣೆಗೆ ಯತ್ನಿಸುತ್ತಿರುವುದು ಉತ್ತಮ ಕೆಲಸ. ಜಿಲ್ಲೆ ಈಗಾಗಲೇ 15ನೇ ಸ್ಥಾನದಲ್ಲಿದ್ದು, ಮುಂದೆ ಟಾಪ್ 10ರಲ್ಲಿ ಸ್ಥಾನ ಪಡೆಯಬೇಕು. ಅದಕ್ಕೆ ಬೇಕಾದ ತಯಾರಿ ಮಾಡೋಣ. ಕಾರ್ಯಾಗಾರ ದಿಕ್ಸೂಚಿಯಾಗಲಿ. ಎಲ್ಲ ಶಿಕ್ಷಕರು ಬದ್ಧತೆಯಿಂದ ಬೋಧನಾ ಕಾರ್ಯದಲ್ಲಿ ತೊಡಗಿ ಎಂದರು.


ಮುನಿರಾಬಾದ್ ಡಯೆಟ್ ಪ್ರಾಚಾರ್ಯ ಕೆ.ಡಿ.ಬಡಿಗೇರ ಮಾತನಾಡಿ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೊಪ್ಪಳ ಉತ್ತಮ ಸ್ಥಾನದಲ್ಲಿದೆ. ತಿರುಳ್ಗನ್ನಡ ನಾಡು ಎಂದು ಕರೆಯಲ್ಪಡುವ ಕೊಪ್ಪಳ ಈ ಸಲ ಮೊದಲ ಹತ್ತರ ಸ್ಥಾನಗಳಲ್ಲಿ ಹೆಸರು ಪಡೆಯಲಿ. ಈಗಿನಿಂದಲೇ ಸಿದ್ಧತೆಗಳಾಗಬೇಕು. ಅಧಿಕಾರಿಗಳು ಹಾಗೂ ಶಿಕ್ಷಕರು ಸೇರಿ ಜಿಲ್ಲೆಯ ಫಲಿತಾಂಶ ಸುಧಾರಣೆಯಲ್ಲಿ ಶ್ರಮಿಸೋಣ ಎಂದರು.


ನಿಕಟಪೂರ್ವ ಡಿಡಿಪಿಐ ಎಂ.ಎ.ರಡ್ಡೇರ ವಿಶೇಷ ಉಪನ್ಯಾಸ ನೀಡಿದರು. ಇಂಗ್ಲೀಷ್ ಶಿಕ್ಷಕ ಕೋಟೆಪ್ಪ ಮೇಟಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬರೆದ ಇಂಗ್ಲೀಷ್ ಸ್ಕೋರಿಂಗ್ ಪ್ಯಾಕೇಜ್ ಮತ್ತು ಸ್ಮಾರ್ಟ್ ಆ್ಯಂಡ್ ಸ್ಮಾರ್ಟ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಮಾರ್ತಂಡರಾವ್ ದೇಸಾಯಿ, ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ ಸೇರಿ ಪದಾಧಿಕಾರಿಗಳು, ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net