ಫಲಿತಾಂಶ ಕೊಡಿ ಇಲ್ಲವೇ ಕೆಲಸ ಬಿಡಿ

aurad meeting
ಔರಾದ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿದರು. ಬಿಇಒ ಬಿ.ಜೆ ರಂಗೇಶ್, ಇಒ ಪ್ರಕಾಶ ಸೂರ್ಯವಂಶಿ ಇತರರಿದ್ದರು.
Published on

ಔರಾದ್: ಶಿಕ್ಷಣದ ಸುಧಾರಣೆಗೆ ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಫಲಿತಾಂಶ ಕುಸಿಯುತ್ತಿದೆ. ಈ ಬಾರಿ ಎಲ್ಲ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಹೊಂದಿದ್ದೇನೆ. ಸರಿಯಾದ ಫಲಿತಾಂಶ ಕೊಡಿ ಇಲ್ಲವಾದರೆ ತಾವಾಗಿಯೇ ಕೆಲಸ ಬಿಟ್ಟು ಹೋಗಿ ಎಂದು ಶಾಸಕ ಪ್ರಭು ಚವ್ಹಾಣ್ ಅವರು ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಖಾರವಾಗಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯಿಂದ ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಭೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಕ್ಷಕರ ಮೇಲಿನ ಗೌರವದಿಂದಾಗಿ ಇಷ್ಟು ದಿನ ಸುಮ್ಮನಿದ್ದೆ. ಶಿಕ್ಷಕರು ಪ್ರತಿ ಬಾರಿ ಉತ್ತಮ ಫಲಿತಾಂಶ ಕೊಡುವುದಾಗಿ ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡುತ್ತಾ ಬರುತ್ತಿದ್ದೀರಿ. ಆದರೆ ಫಲಿತಾಂಶ ಮಾತ್ರ ಸುಧಾರಿಸಿಲ್ಲ. ಹಿಂದೆ ಶೇ.೮೨ ಇದ್ದ ಫಲಿತಾಂಶ ಇದೀಗ ಶೇ.೫೫ಕ್ಕೆ ಕುಸಿದಿದೆ. ಈ ಬಾರಿ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಅಗತ್ಯವೆನಿಸಿದರೆ ರಸ್ತೆಗಿಳಿದು ಪ್ರತಿಭಟನೆ ಮಾಡುವುದಕ್ಕೂ ಸಿದ್ಧ ಎಂದರು.

ಶಾಲೆಗಳಿಗೆ ಕಟ್ಟಡ, ಕುಡಿಯುವ ನೀರು, ಶೌಚಗೃಹ, ಕಂಪೌಂಡ್‌ನಂಥ ಸೌಕರ್ಯಗಳನ್ನು ಒದಗಿಸುವುದು ನನ್ನ ಜವಾಬ್ದಾರಿ. ಇಂಥ ಬೇಡಿಕೆಗಳಿದ್ದರೆ ನನ್ನ ಬಳಿಗೆ ಬನ್ನಿ ಕಲ್ಪಿಸುತ್ತೇನೆ. ಗುಣಮಟ್ಟದ ಶಿಕ್ಷಣ, ಉತ್ತಮ ಫಲಿತಾಂಶ ಕೊಡುವುದು ನಿಮ್ಮ ಜವಾಬ್ದಾರಿ. ಯಾವುದೇ ರೀತಿಯ ಸಮಸ್ಯೆಯಿರಲಿ ನಾನು ನಿಮ್ಮ ಜತೆಗಿದ್ದೇನೆ. ಆದರೆ ನೀವು ಕರ್ತವ್ಯದಲ್ಲಿ ಲೋಪವಾಗದಂತೆ ಕೆಲಸ ಮಾಡಬೇಕೆಂದು ಮುಖ್ಯ ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಂತವಾಗಿದ್ದರೆ ನಡೆಯುವುದಿಲ್ಲ. ಪದೇ ಪದೆ ಗೈರಾಗುವವರು, ಸರಿಯಾಗಿ ಬೋಧನೆ ಮಾಡದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇಂಥವುಗಳು ನಡೆದರೆ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಅಧಿನದಲ್ಲಿರುವ ಎಲ್ಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಬಿಇಒ ಬಿ.ಜೆ ರಂಗೇಶ್, ತಾಪಂ ಇಒ ಪ್ರಕಾಶ ಸೂರ್ಯವಂಶಿ, ಬಿಆರ್‌ಸಿ ಪ್ರಕಾಶ ರಾಠೋಡ್, ಬಿಸಿಯೂಟ ಅಧಿಕಾರಿ ಧೂಳಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಢರಿ ಆಡೆ, ಕಸಾಪ ತಾಲೂಕಾಧ್ಯಕ್ಷ ಬಾಲಾಜಿ ಅಮರವಾಡಿ, ತಾಪಂ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ, ಬಲಭೀಮ ಕುಲಕರ್ಣಿ ಇತರರಿದ್ದರು.

ಅಧಿಕಾರಿಗಳಿಗೆ ತರಾಟೆ: ಗ್ರಾಮ ಸಂಚಾರದ ಸಂದರ್ಭದಲ್ಲಿ ಪ್ರತಿ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿದ್ದೇನೆ. ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲದಿರುವುದು ಕಾಣಿಸಿದೆ. ಸರಿಪಡಿಸುವಂತೆ ಸಾಕಷ್ಟು ಬಾರಿ ಹೇಳಿದರೂ ಏನೂ ಮಾಡಿಲ್ಲವೆಂದು ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ್ ತರಾಟೆಗೆ ತೆಗೆದುಕೊಂಡರು. ಅಂಥ ಸಮಸ್ಯೆಗಳನ್ನು ಸರಿಪಡಿಸಿರುವುದಾಗಿ ಬಿಇಒ ಮಾಹಿತಿ ನೀಡಿದರು.

ಕೆಲ ಶಾಲೆಗಳಲ್ಲಿ ೭, ೮ನೇ ತರಗತಿಯ ಮಕ್ಕಳಿಗೆ ಸರಿಯಾಗಿ ಕನ್ನಡ ಓದಲು, ಬರೆಯಲು ಬರುತ್ತಿಲ್ಲ. ಹೀಗಾದರೆ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ ? ಕಲಿಕೆಯಲ್ಲಿ ತೀವ್ರ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ ನೀಡಬೇಕು.

| ಪ್ರಭು ಚವ್ಹಾಣ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net