ಫಲಿತಾಂಶ ಆಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಲಾಭ

8
Published on

ಮೈಸೂರು: ಫಲಿತಾಂಶ ಆಧಾರಿತ ಶಿಕ್ಷಣದ ವಿಧಾನವನ್ನು ಅಳವಡಿಸಿಕೊಂಡಾಗ ಬೋಧನೆಯಲ್ಲಿ ನಿಖರತೆ ಪ್ರಾಪ್ತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಫಲಿತಾಂಶ ಆಧಾರಿತ ಶಿಕ್ಷಣ’ ಎರಡು ದಿನಗಳ ಬೋಧಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಫಲಿತಾಂಶ ಆಧಾರಿತ ಶಿಕ್ಷಣದಿಂದ ಸಾಕಷ್ಟು ಅನುಕೂಲಗಳು ಇವೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಪ್ರತಿಯೊಂದು ವಿಷಯದ ಮೇಲೆ ಆಳವಾದ ಮತ್ತು ಸ್ಪಷ್ಟವಾದ ತಿಳಿವಳಿಕೆ ಮತ್ತು ಜ್ಞಾನ ಪಡೆಯಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ಕಾಡುವ ಪ್ರಶ್ನೆ ಔದ್ಯೋಗಿಕ ಬದುಕಿನದ್ದು. ಈ ಔದ್ಯೋಗಿಕ ಬದುಕಿಗೆ ವಿದ್ಯಾರ್ಥಿಗಳನ್ನು ಹತ್ತಿರ ತೆಗೆದುಕೊಂಡು ಹೋಗುವುದರಲ್ಲಿ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮುಗೇಶಪ್ಪ ಮಾತನಾಡಿ, ಪಠ್ಯಕ್ರಮಗಳು ಬದಲಾವಣೆಯಾದಂತೆ ಬೋಧನಾ ವಿಧಾನಗಳೂ ಬದಲಾಗುತ್ತಿರುತ್ತವೆ. ಬೋಧನೆ ಮತ್ತು ಸಂಶೋಧನೆಯಲ್ಲಿ ಸಿಗುವ ಫಲಿತಾಂಶ ಕುರಿತು ಪ್ರಾಧ್ಯಾಪಕರು ಆಲೋಚಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ನೀಡಬಹುದಾದ ಉತ್ತಮ ಬೋಧನೆಯ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.

ಕೇರಳದ ಐಪಿಎಸ್‌ಆರ್ ಸಲ್ಯೂಷನ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮೆಂಡಸ್ ಜೊಕೋಬ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಫಲಿತಾಂಶ ಆಧಾರಿತ ಶಿಕ್ಷಣದ ಮಾದರಿ ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಬ್ಬರಿಗೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರಾಧ್ಯಾಪಕರಿಗೆ ಇದರ ಬಗ್ಗೆ ಅರಿವು ಮೂಡಿಸಲು ಆಯೋಜಿಸಿರುವ ಈ ಕಾರ್ಯಾಗಾರ ಅತ್ಯುತ್ತಮವಾಗಿದೆ ಎಂದು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿದರು.ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಐಕ್ಯೂಎಸಿ ಸಂಚಾಲಕ ಡಾ.ಎನ್.ರಾಜೇಂದ್ರ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net