ಫಲಾಹಾರ ಶಿವಯೋಗೀಶ್ವರ ಮಹಿಮೆ ಅಪಾರ

8-11
ಅವರಾದಿಯ ಶ್ರೀ ಫಲಹಾರೇಶ್ವರ ಸಂಸ್ಥಾನ ಮಠ.
Published on

ಸುರೇಬಾನ: ಶ್ರೀಶೈಲದಲ್ಲಿ ತಪಗೈದು ನಾಡಿನಾದ್ಯಂತ ಸಂಚರಿಸಿ ಹಲವಾರು ಪವಾಡ ಮಾಡಿ, 18ನೇ ಶತಮಾನದಲ್ಲಿ ಭಕ್ತರ ಉದ್ಧಾರಕ್ಕಾಗಿ ಅವರಾದಿಯಲ್ಲಿ ನೆಲೆನಿಂತು ಫಲಗಳನ್ನೇ ಆಹಾರವಾಗಿ ಸ್ವೀಕರಿಸುತ್ತಿದ್ದ ಶಿವಯೋಗಿ, ಫಲಾಹಾರ ಶಿವಯೋಗಿಗಳೆಂದು ಅಭಿದಾನ ಪಡೆದು ಶ್ರೀಮಠವನ್ನು ಸ್ಥಾಪಿಸಿದರು.

ಫಲಾಹಾರ ಶಿವಯೋಗಿಗಳು ಪೂಜಾನಿರತ ಸಮಯದಲ್ಲಿ ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ಪೂಜಾ ಸ್ಥಳದಿಂದಲೇ ಕೈ ಎತ್ತಿ ಹಿಡಿದು ಬದುಕಿಸಿ, ಆ ಮಗುವಿಗೆ ಶಿವಮೂರ್ತಿ ಸ್ವಾಮೀಜಿ ಎಂದು ನಾಮಕರಣ ಮಾಡಿ, ತಮ್ಮ ಉತ್ತರಾಧಿಕಾರಿಯಾಗಿ ಮಾಡಿದರು. ಶ್ರೀಮಠದ ಪರಂಪರೆಯಲ್ಲಿ ಶಿವಮೂರ್ತಿ ಸಾಮೀಜಿ ನಂತರ ಅಡವಿ ಸ್ವಾಮೀಜಿ, ಶಿವ ಸ್ವಾಮೀಜಿ ಉತ್ತರಾಧಿಕಾರಿಯಾದರು.

ಐದನೇ ಪೀಠಾಧಿಪತಿಯಾಗಿ ಬಂದ ಸಂಗನಬಸವ ಸ್ವಾಮೀಜಿ, ವಿದ್ಯಾರ್ಥಿಗಳಿಗಾಗಿಯೇ ರಾಮದುರ್ಗದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು. ತಮ್ಮ ತರುವಾಯ ಶಿವಮೂರ್ತಿ ಸ್ವಾಮೀಜಿ ಉತ್ತರಾಧಿಕಾರಿಯಾಗಿ ಮಾಡಿ ಶ್ರೀಮಠದ ಜವಾಬ್ದಾರಿ ವಹಿಸಿದರು. ಬಳಿಕ ಉತ್ತರಾಧಿಕಾರಿಯಾದ ಮೃತ್ಯುಂಜಯ ಸ್ವಾಮೀಜಿ, ಧಾರವಾಡ ಮುರುಘಾಮಠದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ. ಎ. ಪದವಿ ಪಡೆದರು. ಒಂದನೇ ತರಗತಿಯಿಂದ ಹಿಡಿದು ಪದವಿ ಹಾಗೂ ತಾಂತ್ರಿಕ ಮಹಾವಿದ್ಯಾಲಯದವರೆಗೆ ಹೀಗೆ ಸುಮಾರು 15ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಹೆಮ್ಮೆರವಾಗಿ ಬೆಳೆಸಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ ತ್ರಿವಿಧ ದಾಸೋಹ ಮೂರ್ತಿಗಳೆನಿಸಿದ್ದಾರೆ.

ಅವರ ಆದರ್ಶ ಪಥದಲ್ಲಿ ಇವತ್ತಿನ ಅವರಾದಿಯ ಶ್ರೀಮಠದ 8ನೇ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ, ಗುರುಗಳ ಆದರ್ಶ ಪಥವನ್ನೇ ಉಸಿರಾಗಿಸಿಕೊಂಡು ಭಕ್ತರ ಸಹಾಯ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.8 ರಂದು ಸಂಜೆ 5.30 ಕ್ಕೆ ರಥೋತ್ಸವ ಜರುಗಲಿದೆ. ಡಿ. 9 ರಂದು ಬೆಳಗ್ಗೆ 7 ಗಂಟೆಗೆ ಅಯ್ಯಚಾರ ಕಾರ್ಯಕ್ರಮ ಜರುಗಲಿದೆ. ಸಂಜೆ 6.30 ಕ್ಕೆ ವಚನೋತ್ಸವ ಕಾರ್ಯಕ್ರಮ ಜರುಗುವುದು. ಡಿ.10 ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಜಂಗಮೋತ್ಸವ ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಶ್ರೀ ಮಠದ ಪೂಜ್ಯರಿಂದ ಬೆಲ್ಲ ಸೂರೆ ಉತ್ಸವ ಜರುಗಲಿದೆ. ಸಂಜೆ 6.30 ಕ್ಕೆ ಜಂಗಮೋತ್ಸವ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net