ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ವಾಹನ ವಿತರಿಸಿದ ಶಾಸಕ ಸ್ವರೂಪ್

10_HSN_02A
Published on

ಹಾಸನ: ತಾಲೂಕು ಪಂಚಾಯಿತಿ ಆವರಣದಲ್ಲಿ ಡಾ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳು ಹಾಗೂ ವಾಹನಗಳನ್ನು ಶಾಸಕ ಸ್ವರೂಪ್ ಪ್ರಕಾಶ್ ಗುರುವಾರ ವಿತರಿದರು.

ಬಳಿಕ ಮಾತನಾಡಿದ ಅವರು, ಸರ್ಕಾರ ಮಹಿಳೆಯರು ಹಾಗೂ ಬಡವರನ್ನು ಮೇಲುತ್ತುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದೇ ರೀತಿ ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯದ ಜನರಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಈ ಯೋಜನೆ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೊಲಿಗೆ ಯಂತ್ರಗಳನ್ನು ನೀಡಲು ಮುಂದಾಗಿದ್ದು ಇದರಿಂದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲವಾಗಲಿದೆ. ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಆ ಮೂಲಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಅದೇ ರೀತಿ ನಿರುದ್ಯೋಗಿ ಯುವಕ-ಯುವತಿಯರಿಗೂ ಸ್ವಾವಲಂಬಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಿಗಮಗಳು ಕೆಲಸ ಮಾಡುತ್ತಿದ್ದು ಅದರಂತೆ ಸಾಂಕೇತಿಕವಾಗಿ ಸಾರಥಿ ಯೋಜನೆ ಅಡಿಯಲ್ಲಿ ವಾಹನಗಳನ್ನು ವಿತರಿಸಲಾಗಿದೆ. ಆ ಮೂಲಕ ಆರ್ಥಿಕ ಸಾಮಾಜಿಕವಾಗಿ ಅವರನ್ನು ಸದೃಢರನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಇದನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ರಂಗಸ್ವಾಮಿಯವರು ಮಾತನಾಡಿ, ಸ್ವಾವಲಂಬಿ ಬದುಕಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಪೈಕಿ ಮಹಿಳೆಯರು ಹಾಗೂ ನಿರುದ್ಯೋಗಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಹೊಲಿಗೆ ಯಂತ್ರ ವಿತರಣೆ ಹಾಗೂ ಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಅದರಂತೆ ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಡುಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹೊಲಿಗೆ ಯಂತ್ರಗಳು ಹಾಗೂ ವಾಹನಗಳನ್ನು ವಿತರಿಸಲಾಗಿದೆ. ಒಟ್ಟು 35 ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ 15 ಜನ ಸಾರಥಿ ಯೋಜನೆಗಳ ಫಲಾನುಭವಿಗಳಿಗೆ ಕಾರುಗಳನ್ನು ನೀಡಲಾಗುತ್ತಿದ್ದು ಇಂದು ಸಾಂಕೇತಿಕವಾಗಿ ವಿತರಿಸಲಾಗಿದೆ ಎಂದರು.

ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸರ್ಕಾರದ ಅನುಗುಣವಾಗಿ ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net