ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

IMG_20221215_152015
Published on


ಬಾಗೂರು (ನುಗ್ಗೇಹಳ್ಳಿ): ಹೋಬಳಿಯ ಚಿಕ್ಕೋನಹಳ್ಳಿ ಗ್ರಾಮದಲ್ಲಿ 40 ವರ್ಷಗಳಿಂದ 52 ಎಕರೆ ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿದ್ದ 37 ರೈತರಿಗೆ ಸರ್ಕಾರದ ಆದೇಶದಂತೆ ಬಗರ್‌ಹುಕುಂ ಕಮಿಟಿ ಮೂಲಕ ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮಾಹಿತಿ ನೀಡಿದರು.

ಹೋಬಳಿಯ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಾಣ ಮಾಡಿದ್ದ ಹೆಚ್ಚುವರಿ ಕೊಠಡಿ ಉದ್ಘಾಟನೆ ಹಾಗೂ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿ ರೈತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.


ಗ್ರಾಮದ ರೈತರು ಕಳೆದ 40 ವರ್ಷಗಳಿಂದ 52 ಎಕರೆ ಸರ್ಕಾರಿ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದರು. ಅನೇಕ ವರ್ಷಗಳ ಹಿಂದೆಯೇ ಬಗರ್ ಹುಕುಂ ಕಮಿಟಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಯಿಂದ ಪರಿಶೀಲನೆ ನಡೆಸಿ ಅರ್ಹ 37 ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದು ಜಿಲ್ಲೆಯಲ್ಲೇ ದೊಡ್ಡ ಮಟ್ಟದಲ್ಲಿ ರೈತರಿಗೆ ಹಕ್ಕು ವಿತರಣೆ ಮಾಡಿದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಗ್ರಾಮದ ವ್ಯಾಪ್ತಿಯಲ್ಲಿ 15 ಎಕರೆ ಸರ್ಕಾರಿ ಗೋಮಾಳದ ಜಾಗವಿದ್ದು, ಈ ಜಾಗವನ್ನು ಕೂಡ ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಕಂದಾಯ ಇಲಾಖೆಗೆ ದಾಖಲಾತಿ ಸರಿಪಡಿಸಲು ತಿಳಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 6 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗಿದ್ದು, ಇದರಿಂದ ಗ್ರಾಮದಲ್ಲಿ ಪಡಿತರದಾರರಿಗೆ ಅಕ್ಕಿ ವಿತರಣೆ ಮಾಡಲು ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿದರು.


ತಹಸೀಲ್ದಾರ್ ಗೋವಿಂದರಾಜ್ ಮಾತನಾಡಿ, ಸರ್ಕಾರದ ಆದೇಶ, ಬಗರ್ ಹುಕುಂ ಕಮಿಟಿಯ ನಿರ್ಧಾರದಂತೆ 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದರು.


ಬಗರ್‌ಹುಕುಂ ಕಮಿಟಿ ಸದಸ್ಯರಾದ ರವಿ, ಛಾಯಾ ಕೃಷ್ಣಮೂರ್ತಿ, ಬಸವರಾಜ್, ಮುಖಂಡರಾದ ಬಿ.ಎಚ್.ಶಿವಣ್ಣ, ಓಬಳಾಪುರ ಬಸವರಾಜ್, ಚಂದ್ರಪ್ಪ, ಕೆ.ಟಿ.ಮಂಜಣ್ಣ, ಹುಲ್ಲೇನಹಳ್ಳಿ ನಾರಾಯಣ್, ದುಗ್ಗೇನಹಳ್ಳಿ ವೀರೇಶ್, ಸಂತೋಷ್, ಪ್ರಕಾಶ್, ಗ್ರಾಪಂ ಅಧ್ಯಕ್ಷ ನವಿಲೆ ದೀಪು, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎಸ್.ಬಸವರಾಜು, ಸಂಘದ ಅಧ್ಯಕ್ಷೆ ಗಾಯಿತ್ರಿ ಪ್ರಕಾಶ್, ಗ್ರಾಪಂ ಸದಸ್ಯೆ ಭದ್ರಮ್ಮ, ಹೋಬಳಿ ಉಪತಹಸೀಲ್ದಾರ್ ಕುಮಾರ್, ಕಂದಾಯ ಅಧಿಕಾರಿ ರಾಜ್‌ಪ್ರೇಮ್ ಕುಮಾರ್, ಗ್ರಾಮಲೆಕ್ಕಿಗರಾದ ಚಂದ್ರಭೂಷಣ್, ಲಕ್ಷ್ಮೀಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net