

ಬಾಗಲಕೋಟೆ: ಸರ್ಕಾರದ ಸ್ವನಿರ್ಧಾರಿತ ಉದ್ಯೋಗ ಯೋಜನೆಯಡಿಯಲ್ಲಿ 60 ದಿನಗಳ ಚರ್ಮ ವಸ್ತುಗಳ ತಯಾರಿಕೆಗೆ ಸಂಬಂಧಿಸಿದಂತೆ ತರಬೇತಿ ಪಡೆದ ಫಲಾನುಭವಿಗಳಿಗೆ ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಸೌಲಭ್ಯಗಳನ್ನು ಸೋಮವಾರ ವಿತರಿಸಿದರು.
ನವನಗರದ ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಂಡ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು ತಾಂತ್ರಿಕ ತರಬೇತಿಯನ್ನು ಪಡೆದ ಫಲಾನುಭವಿಗಳು ಇದೀಗ ಸ್ವ ಉದ್ಯೋಗ ಆರಂಭಿಸಲು ಸಜ್ಜಾಗಿದ್ದು, ಈ ತರಬೇತಿ ಕಾರ್ಯಕ್ರಮದಿಂದ ಅವರ ಜೀವನದ ಸುಧಾರಣೆ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಕೈಗಾರಿಕಾ ಉಪಕರಣಗಳು, ಕಚ್ಚಾ ಮಾಲು ಮತ್ತು ಇತರ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು. ತರಬೇತಿ ಪಡೆದ ಫಲಾನುಭವಿಗಳು ತರಬೇತಿಯ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಚಾನಕಿ ಕೆ.ಎಂ, ಲಿಡಕರ ಸಂಸ್ಥೆಯ ಅಧ್ಯಕ್ಷ ನಾಗರಾಜ ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.