

ಮೈಸೂರು: ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ), ಪಿಎಂ ವಿಶ್ವಕರ್ಮ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಿಲ್ಲ. ಜತೆಗೆ ಈ ಯೋಜನೆಯಡಿ ಬಂದಿರುವ ಅರ್ಜಿಗಳ ಪ್ರಮಾಣ ಕಡಿಮೆ. ಅದರಲ್ಲೂ ಬ್ಯಾಂಕ್‌ಗಳಲ್ಲಿ ಮಂಜೂರಾಗಿರುವ ಸಾಲದ ಪ್ರಮಾಣವೂ ಕಡಿಮೆಯಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಿಎಲ್‌ಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬಡವರು, ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಉತ್ತೇಜಿಸಲು ಅನೇಕ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಅದೇ ರೀತಿ ಸ್ವಯಂಉದ್ಯೋಗ, ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಲ ನೀಡುವ ವ್ಯವಸ್ಥೆ ಇದೆ. ಅಧಿಕಾರಿಗಳು ಆದ್ಯತೇತರ ವಲಯದಲ್ಲಿ ನಿರೀಕ್ಷಿತ ಗುರಿ ತಲುಪದೆ ಇರುವುದು ಸರಿಯಲ್ಲ. ಪಿಎಂಇಜಿಪಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಕೊಟ್ಟಿರುವ ಗುರಿಯನ್ನೂ ತಲುಪಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಆದ್ಯತೆ, ಆದ್ಯತೇರರ ವಲಯಗಳಲ್ಲದೆ ಸರ್ಕಾರದ ವಿವಿಧ ಯೋಜನೆಗಳಡಿ ನೀಡಿರುವ ಗುರಿಯನ್ನು ನಿಗದಿತ ಅವಧಿಯೊಳಗೆ ಸಾಧಿಸಬೇಕು. ಫಲಾನುಭವಿಗಳ ಅರ್ಜಿಯನ್ನು ತಿರಸ್ಕರಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸಿ ಸಾಲ ಮಂಜೂರು ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಸರ್ಕಾರದಿಂದ ನೀಡಿರುವ ಗುರಿ, ಮಂಜೂರಾತಿ, ಬಾಕಿ, ತಿರಸ್ಕಾರ ಮಾಡಿರುವ ಕುರಿತು ಆಯಾ ಮೂರು ತಿಂಗಳಲ್ಲಿ ವಿವರಣೆ ನೀಡಬೇಕು. ಕೆಲ ಬ್ಯಾಂಕ್‌ಗಳು ಪ್ರಗತಿಯನ್ನೇ ಸಾಧಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮಾತನಾಡಿ, ಕೃಷಿ ಭಾಗ್ಯ ಯೋಜನೆಯಡಿ 67 ಸಾಲದ ಅರ್ಜಿಗಳಲ್ಲಿ 19ಕ್ಕೆ ಮಾತ್ರ ಮಂಜೂರಾತಿ ಸಿಕ್ಕಿದೆ. ಎಸ್‌ಬಿಐ, ಕೆನರಾ ಸೇರಿದಂತೆ ಇತರ ಬ್ಯಾಂಕ್‌ಗಳಲ್ಲಿ ಅರ್ಜಿಗಳು ಬಾಕಿ ಉಳಿದಿವೆ. ಬ್ಯಾಂಕ್‌ಗಳು ಸಾಲ ಕೊಡುವುದಕ್ಕೆ ಮುಂದಾಗದಿದ್ದರೆ ಸರ್ಕಾರದ ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ. ಕೊಟ್ಟಿರುವ ಗುರಿಯನ್ನು ಪೂರ್ಣ ಮಾಡದಿದ್ದರೆ ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಪಟ್ಟಿ ಸಲ್ಲಿಸಲು ಕಷ್ಟವಾಗಲಿದೆ. ಆದ್ದರಿಂದ ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ನಾಗೇಶ್ ಮಾತನಾಡಿ, ಸಾಲ ಮಂಜೂರಾತಿಯಲ್ಲಿ ಜಿಲ್ಲೆಯಲ್ಲಿ ಶೇ.65ರಷ್ಟು ಪ್ರಗತಿ ಸಾಧಿಸಲಾಗಿದೆ. ಕೆಲ ಅರ್ಜಿಗಳು ತಿರಸ್ಕಾರಗೊಂಡಿವೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲು ಸೂಚಿಸಲಾಗವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 690 ಅರ್ಜಿಗಳು ಬಂದಿದ್ದು, ಈಗಾಗಲೇ 163 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 235 ಅರ್ಜಿ ತಿರಸ್ಕರಿಸಿದ್ದರೆ, 250 ಬಾಕಿ ಉಳಿದಿದೆ. ತಾಂತ್ರಿಕ ಮತ್ತು ಮತ್ತಿತರ ಕಾರಣಗಳಿಂದ ತಿರಸ್ಕರಿಸಲಾಗಿರುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ಯಾವುದೇ ಫಲಾನುಭವಿಯ ಅರ್ಜಿ ತಿರಸ್ಕರಿಸುವ ಮುನ್ನ ಪರಿಶೀಲಿಸಬೇಕು. ವಿಳಂಬ ಮಾಡಿ ಅಮೇಲೆ ತಿರಸ್ಕರಿಸಬಾರದು. ಗ್ರಾಮಾಂತರ ಪ್ರದೇಶದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪಿಎಂ ವಿಶ್ವಕರ್ಮ ಯೋಜನೆ ಉಪಯುಕ್ತವಾಗಿದೆ. ಈ ಯೋಜನೆಯಡಿ ಹೆಚ್ಚು ಜನರನ್ನು ಗುರುತಿಸಿ ಸಾಲ ನೀಡಿದರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಜಾಗೃತಿ ಮೂಡಿಸಿ ಸೈಬರ್ ಕ್ರೈಮ್‌ನಂತಹ ಕೃತ್ಯಗಳ ತಡೆ ಬಗ್ಗೆ ಪ್ರತಿಯೊಂದು ಬ್ಯಾಂಕ್‌ಗಳು ಗಮನ ವಹಿಸಬೇಕು ಎಂದು ಸಂಸದರು ಹೇಳಿದರು.
ಪ್ರತಿಯೊಂದು ಬ್ಯಾಂಕ್‌ಗಳು ಪ್ರತಿ ಜಿಲ್ಲೆಗಳಲ್ಲಿ ಅಭಿಯಾನ ನಡೆಸಬೇಕು. ಹೊಸ ಹೊಸ ಯೋಜನೆಗಳ ಮೂಲಕ ಸಾರ್ವಜನಿಕರ ಕನಸುಗಳಿಗೆ ಜೀವ ತುಂಬಬೇಕು ಎಂದು ಹೇಳಿದರು. ವಿವಿಧ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.