

ಗುಂಡ್ಲುಪೇಟೆ: ಮೂರು- ನಾಲ್ಕು ದಶಕಗಳಿಂದ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಅಕ್ರಮ- ಸಕ್ರಮ ಯೋಜನೆಯ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ ಮಾಡಿ ಅವರು ಮಾತನಾಡಿದರು.
ಬಹುತೇಕ ರೈತರು ಕಳೆದ 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದರೂ ಸಾಗುವಳಿ ಚೀಟಿ ದೊರೆಯದೆ ಸರ್ಕಾರದ ಯಾವುದೇ ಸವಲತ್ತುಗಳನ್ನು ಸಿಗದಂತಾಗಿತ್ತು. ನಾನು ಶಾಸಕನಾದ ನಂತರ ಅಧಿಕಾರಿಗಳ ಜತೆಗೂಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಸುಮಾರು 4 ಸಾವಿರ ರೈತರನ್ನು ಭೇಟಿ ಮಾಡಿ ಪರಿಶೀಲಿಸಿ 2 ಸಾವಿರ ಅರ್ಹರನ್ನು ಗುರುತಿಸಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಹಕ್ಕು ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.
ಬಗರ್ ಹುಕುಂ ಸಮಿತಿ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಪ್ರಭಾರ ತಹಸೀಲ್ದಾರ್ ಜಯಪ್ರಕಾಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್ ಇತರರು ಇದ್ದರು.