ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿ

SOMANNA HALLI
Published on

ಕೊಪ್ಪಳ: ನಗರಸಭೆಯಿಂದ ಸಿಂದೋಗಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಎರಡು ಸಾವಿರ ಗುಂಪು ಮನೆ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಒತ್ತಾಯಿಸಿದರು.


ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ದಶಕದ ಹಿಂದೆ ಯೋಜನೆ ರೂಪಿಸಲಾಗಿದೆ. ಫಲಾನುಭವಿಗಳಿಂದ ತಲಾ 30 ಸಾವಿರ ರೂ. ವಂತಿಕೆ ಕಟ್ಟಿಸಿಕೊಂಡಿದ್ದಾರೆ. ಇಷ್ಟು ವರ್ಷವಾದರೂ ಮನೆ ನೀಡಿಲ್ಲ. ಕೇವಲ 200 ಮನೆ ನಿರ್ಮಿಸಿದ್ದಾರೆ. ಅವು ಅರೆ-ಬರೆಯಾಗಿವೆ. ಈಗ ಹಕ್ಕು ಪತ್ರ ವಿತರಿಸುತ್ತಿದ್ದಾರೆ. ಹಣ ಕಟ್ಟಿದ ಕೆಲ ಫಲಾನುಭವಿಗಳು ಮರಣ ಹೊಂದಿದ್ದಾರೆ. ಯೋಜನೆಗೆ ಎಷ್ಟು ಅನುದಾನ ಬಂದಿದೆ, ಕಾಮಗಾರಿ ನಡೆಸಿದ ವಿವರ, ಬಾಕಿ ಕಾಮಗಾರಿ ನಡೆಸುತ್ತಾರಾ, ಇಲ್ಲವಾ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಉತ್ತರಿಸುತ್ತಿಲ್ಲ. ನಗರಸಭೆಯಲ್ಲಿ ಯಾವೊಂದು ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲವೆಂದು ದೂರಿದರು.


ಮನೆ ನಿರ್ಮಾಣ ಜಾಗದಲ್ಲಿ ಜಾಲಿ ಬೆಳೆದಿದೆ. ವಿದ್ಯುತ್, ಕುಡಿವ ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳಿಲ್ಲ. ಆದರೂ, ಹಂಚಿಕೆ ಮಾಡುತ್ತಿದ್ದಾರೆ. ಸೌಲಭ್ಯಗಳಿಲ್ಲದ ಕಡೆ ಜನ ಹೇಗೆ ವಾಸ ಮಾಡಬೇಕು ? ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವೆ. ಅವರಿಂದ ಉತ್ತರ ಬಂದಿಲ್ಲ. ಯೋಜನೆಯಂತೆ ಮೂಲ ಸೌಕರ್ಯ ಕಲ್ಪಿಸಿ ಮನೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಫಲಾನುಭವಿಗಳ ವಂತಿಕೆ ಹಣವನ್ನು ವಾಪಸ್ ಅವರಿಗೆ ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net