

ಹುಣಸೂರು: ಗಂಗಾಕಲ್ಯಾಣ ಯೋಜನೆಯ ಪ್ರತಿ ಫಲಾನುಭವಿಗೆ 2.50 ಲಕ್ಷ ರೂ. ಮೊತ್ತದ ಗುಣಮಟ್ಟದ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ 54 ಮಂದಿ ಫಲಾನುಭವಿಗಳಿಗೆ ಬೋರ್‌ವೆಲ್‌ಗೆ ಅಗತ್ಯವಾದ ಪೈಪ್, ಮೋಟಾರು ಸೇರಿದಮತೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
2018ರಲ್ಲಿ ಅನುಮೋದನೆಗೊಂಡಿದ್ದ ಈ ಯೋಜನೆ ಇದೀಗ ಜಾರಿಗೊಳ್ಳುತ್ತಿದೆ. ಫಲಾನುಭವಿಗಳಿಗೆ ಬೋರ್‌ವೆಲ್ ಕೊರೆಯಿಸಿಕೊಂಡು ಕಳೆದ 4 ವರ್ಷಗಳಿಂದ ಸಕಲಕರಣೆಗಾಗಿ ಕಾಯುತ್ತಿದ್ದರು. ಸೆಸ್ಕ್ ವತಿಯಿಂದ ವಿದ್ಯುತ್ ಸಂಪರ್ಕ ನೀಡಿ ಆರ್‌ಆರ್ ನಂಬರ್ ಕೂಡ ನೀಡಲಾಗಿದೆ. ಇದೀಗ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟು ಫಲಾನುಭವಿಯ ಜಮೀನಿನಲ್ಲಿ ಗಂಗೆ ಹರಿಯುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ 15 ದಿನಗಳಲ್ಲಿ 2019-20ನೇ 60ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮತ್ತೆ ಸಲಕರಣೆಗಳನ್ನು ವಿತರಿಸಲಿದ್ದೇನೆ ಎಂದರು.
ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಮಲ್ಲೇಶ್, ತಾಲೂಕು ವಿಸ್ತರಣಾಧಿಕಾರಿ ಪರಮೇಶ್ವರ್ ಮತ್ತು ಫಲಾನುಭವಿಗಳು ಹಾಜರಿದ್ದರು.