ಫಲಾನುಭವಿಗಳಿಗೆ ಗಿಡಗಳ ವಿತರಣೆ

24
Published on

ಮೈಸೂರು: ನರೇಗಾ ಯೋಜನೆಯಡಿ ಪಿರಿಯಾಪಟ್ಟಣ ತಾಲೂಕಿನ 34 ಗ್ರಾಪಂಗಳ ವ್ಯಾಪ್ತಿಯಲ್ಲಿ 3500 ಫಲಾನುಭವಿಗಳಿಗೆ ಗಿಡಗಳನ್ನು ವಿತರಣೆ ಮಾಡಲಿದ್ದು, ಗಿಡಗಳ ಜತೆಗೆ 3190 ರೂ. ಕೂಲಿ ಮೊತ್ತ ದೊರೆಯಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಕೃಷ್ಣಕುಮಾರ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮ ಪಂಚಾಯಿತಿ ಎದುರು ಸೋಮವಾರ ಕೈ ತೋಟ ನಿರ್ಮಾಣಕ್ಕೆ ಗಿಡಗಳನ್ನು ವಿತರಿಸಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವತಿಯಿಂದ ಆರೋಗ್ಯಕ್ಕೆ ಪೂರಕವಾದಂತಹ ಗಿಡಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ. ಗಿಡಗಳನ್ನು ಈ ದಿನವೇ ನಾಟಿ ಮಾಡಿ, ಸಂರಕ್ಷಿಸುವುದು ಫಲಾನುಭವಿಗಳ ಜವಾಬ್ದಾರಿಯಾಗಿದೆ. ಗಿಡಗಳನ್ನು ಮಾರಾಟ ಮಾಡದೇ, ಸ್ವತಃ ತಮ್ಮ ಜಮೀನಿನಲ್ಲಿ ನಾಟಿ ಮಾಡಿಕೊಂಡು ಅದರ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರತಿ ಗ್ರಾಪಂ ಮಟ್ಟದಲ್ಲಿ ಸ್ವಸಹಾಯ ಸಂಘದ 101 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಪ್ರತಿ ಫಲಾನುಭವಿಗೆ ತೆಂಗು, ನುಗ್ಗೆ, ನಲ್ಲಿ, ಕರಿಬೇವು, ನಿಂಬೆ, ಚಕ್ರಮುನಿ, ಸೀಬೆ, ಸಪೋಟ ಸೇರಿದಂತೆ 5 ಗಿಡ ವಿತರಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ.ಎನ್.ಸುವೇದ ಮಾತನಾಡಿ, ಮಹಿಳೆಯರು ಗಿಡಗಳನ್ನು ತಮ್ಮ ಜಮೀನಿನಲ್ಲಿ ನಾಟಿ ಮಾಡಿ, ಅಗತ್ಯ ಗೊಬ್ಬರ, ನೀರು ಪೂರೈಸಬೇಕು. ತೆಂಗು, ಚಕ್ರಮುನಿ, ನಿಂಬೆ, ಕರಿಬೇವು ಹೀಗೆ ಉಪಯುಕ್ತವಾದ ಗಿಡ ವಿತರಿಸುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ಕರುಣಾಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಕೆ.ಎನ್.ರಾಮಲಿಂಗಂ, ಪಿಡಿಒ ಪರಮೇಶ್, ಇಂಜಿನಿಯರ್ ರಶ್ಮಿ, ಐಇಸಿ ಸಂಯೋಜಕ ಡಿ.ರವಿಕುಮಾರ್ ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net