

ಬಳ್ಳಾರಿ : ಆಶ್ರಯ ಯೋಜನೆಯಡಿ ನಿರ್ಮಾಣ ಆಗಿರುವ ಮನೆಗಳ ಹಸ್ತಾಂತರ ಕಾರ್ಯ ಶೀಘ್ರ ಆರಂಭಿಸುವಂತೆ ನಗರ ಶಾಸಕ ನಾರಾ ಭರತ್ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಆಶ್ರಯ ಯೋಜನೆ ಸಮಿತಿ ಸಭೆಯಲ್ಲಿ ಯೋಜನೆಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿದರು. ನಗರದ ವಾರ್ಡವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ನಿರ್ಮಾಣ ಆಗಿರುವ 809 ಮನೆಗಳ ಹಸ್ತಾಂತರ ಕೆಲಸ ಶೀಘ್ರ ಆರಂಭ ಆಗಬೇಕು. ಯುದ್ಧೋಪಾದಿಯಲ್ಲಿ ಈ ಕೆಲಸ ನಡೆಯಬೇಕು ಎಂದು ಆದೇಶಿಸಿದರು.
ಮಹಾತ್ಮ ಗಾಂಧಿ ಟೌನ್‌ಶಿಪ್‌ಸಮೀಪ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯೊಂದು ನೆನೆಗುದಿಗೆ ಬಿದ್ದಿದ್ದು, ಹಳೆಯ ಯೋಜನೆಯನ್ನು ಮರು ವಿನ್ಯಾಸಗೊಳಿಸಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ 39 ಎಕರೆ 40 ಸೆಂಟ್ಸ್ ವಿಸ್ತಾರದ ಬೃಹತ್ ಬಡಾವಣೆಯನ್ನು ನಿರ್ಮಿಸಿ ಕೈಗಾರಿಕೆಗಳಿಗೆ ಗುತ್ತಿಗೆ ನೀಡಲಾಗುವುದು, ಈ ಪ್ರದೇಶದಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ, ಟೌನಶಿಪ್ ನಿವಾಸಿಗಳಿಗೆ ಉದ್ಯೋಗ ಅವಕಾಶ ಸಿಗುತ್ತದೆ ಎಂದರು.