

ಮೈಸೂರು: ತೋಟಗಾರಿಕೆಗೆ ಹೊಸ ರೂಪು ನೀಡಿರುವ, ಲಾಲ್‌ಬಾಗ್ ನಿರ್ಮಾಣದ ಹಿಂದಿನ ರೂವಾರಿ ಡಾ. ಎಂ.ಎಚ್ ಮರೀಗೌಡ ಅವರ ಜನ್ಮ ದಿನವನ್ನು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್‌ನಿಂದ ಆಚರಿಸಲಾಯಿತು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಮಾತನಾಡಿ, ವ್ಯಕ್ತಿಯಾಗಿ ನಮ್ಮೊಡನೆ ದೈಹಿಕವಾಗಿ ಇಲ್ಲದ ಮರೀಗೌಡರು ತಮ್ಮ ಸಾಧನೆಗಳ ಮೂಲಕ ಇಂದಿಗೂ ಮುಂದೆಯೂ ನಮ್ಮೊಡನೇಯೇ ಇರುತ್ತಾರೆ. ಅದಕ್ಕಾಗಿಯೇ ಅವರನ್ನು ತೋಟಗಾರಿಕಾ ಇಲಾಖೆಯ ಪಿತಾಮಹ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.
ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಮೂಲಕ ಆದಾಯ ಮಾರ್ಗವನ್ನು ತೋರಿಸಿದ ಕೀರ್ತಿ ಮರೀಗೌಡರಿಗೆ ಸಲ್ಲುತ್ತದೆ. ದೇಶದ ನಕಾಶೆಯಲ್ಲಿ ತೋಟಗಾರಿಕೆ ಬೀಡು ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಹೆಗ್ಗಳಿಕೆ ಅವರಿಗೆ ಸಲ್ಲಬೇಕು ಎಂದರು.
ಬನ್ನೂರು ಸಮೀಪದ ಮಾರಗೌಡನಹಳ್ಳಿಯವರಾದ ಅವರು, ಬನ್ನೂರಿನಲ್ಲಿ ವ್ಯಾಸಂಗ ಆರಂಭಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜ್, ಲಖನೌ ವಿಶ್ವವಿದ್ಯಾನಿಲಯ, ಅಮೇರಿಕಾದ ಹಾರ್ವಂಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಸ ಮಾಡಿದ್ದಾರೆ.
ಇವರ ಅವಧಿಯಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆಆರ್‌ಎಸ್‌ನ ಬೃಂದಾವನ ಅಲ್ಲದೇ ಕೆಮ್ಮಣ್ಣು ಗುಂಡಿ, ನಂದಿಬೆಟ್ಟ ಗಿರಿಧಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿದ ಕೀರ್ತಿ ಸಲ್ಲುತ್ತದೆ. ರಾಜ್ಯದ 1800 ಎಕರೆಯಲ್ಲಿ 394 ತೋಟಗಾರಿಕಾ ಕ್ಷೇತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕೃಷಿ ಜೊತೆಗೆ ರೈತರು ತೋಟಗಾರಿಕೆಯಿಂದ ಆದಾಯ ಕಾಣುವಂತೆ ಮಾಡಿದರು ಎಂದರು.
ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ರಾಜಕುಮಾರ್, ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಬೆಟ್ಟೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ, ಎ.ವಿಕ್ರಾಂತ್ ದೇವೇಗೌಡ, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಹಾಪ್‌ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಮುಖಂಡರಾದ ಉಮೇಶ್, ಕಾರ್ತಿಕ್‌ಗೌಡ, ಅಭಿಷೇಕ್‌ಗೌಡ, ಬಸವರಾಜು, ನೇಹಾ ಇತರರು ಇದ್ದರು.