ಫಲಕವೊಂದು ಕೆಲಸ ಇನ್ನೊಂದು..!

One board, another job..!
Published on

ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಅನುಕೂಲವಾಗಲೆಂದು ಸರ್ಕಾರ ಮಂಗಳಗುಡ್ಡ ಗ್ರಾಮದಲ್ಲೊಂದು ಆರೋಗ್ಯ ಉಪಕೇಂದ್ರ ತೆರೆದಿದೆ. ಬೋರ್ಡ್ ಮಾತ್ರ ದೊಡ್ಡದಾಗಿ ಆರೋಗ್ಯ ಉಪ ಕೇಂದ್ರ ಎಂದು ಬರೆದಿದ್ದಾರೆ. ಒಳಗೆ ಹೋದರೆ ಸರಿಯಾಗಿ ಚಿಕಿತ್ಸೆಯೇ ಸಿಗುವುದಿಲ್ಲ. ‘ಲಕವೊಂದು ಕೆಲಸ ಇನ್ನೊಂದು’ ಎನ್ನುವಂತಾಗಿದೆ.

ಹೌದು, ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಈ ಆರೋಗ್ಯ ಉಪ ಕೇಂದ್ರವಿದೆ. 2009ರಲ್ಲಿ ನೆರೆ ಹಾವಳಿಯಿಂದ ನೆರೆ ಸಂತ್ರಸ್ತರಿಗಾಗಿ ಸರ್ಕಾರ ನಿರ್ಮಿಸಿಕೊಟ್ಟಿರುವ ಆಸರೆ ಮನೆಗಳ ಜಾಗದಲ್ಲಿ ಆರೋಗ್ಯ ಉಪಕೇಂದ್ರದ ಕಟ್ಟಡ ಸಹ ನಿರ್ಮಿಸಿ, ಅಲ್ಲಿ ದೊಡ್ಡ ಅಕ್ಷರಗಳಲ್ಲಿ ಬೋರ್ಡ್ ಸಹ ಬರೆಸಲಾಗಿದೆ. ಆದರೆ ಇದುವರೆಗೂ ಅಲ್ಲಿನ ಜನರಿಗೆ ಆರೋಗ್ಯ ಸೇವೆಯೇ ಸಿಗುತ್ತಿಲ್ಲ.

ಖಾಲಿ ಕೇಂದ್ರ ಬೇರೆ ಕಚೇರಿ: ಆರೋಗ್ಯ ಇಲಾಖೆಗೆ ಉಪಯೋಗವಾಗದೇ ಖಾಲಿ ಬಿದ್ದ ಈ ಕಟ್ಟಡದಲ್ಲಿ ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಅಂಗನವಾಡಿ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರ ಆರಂಭಗೊಂಡು ಜನರಿಗೆ ಸೇವೆ ನೀಡುತ್ತಿದೆ. ಸದ್ಯ ಇರುವ ಆರೋಗ್ಯ ಉಪ ಕೇಂದ್ರಕ್ಕೆ ಸರಿಯಾಗಿ ಸಿಬ್ಬಂದಿ ಬರದಿರುವುದರಿಂದ ಇಲ್ಲಿಯ ಜನರಿಗೆ ಆರೋಗ್ಯ ಸೇವೆ ಗಗನ ಕುಸುಮವಾಗಿದೆ.

ಮಂಗಳಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಟಾಪುರ, ಮಂಗಳಗುಡ್ಡ, ಚಿಮ್ಮಲಗಿ ಗ್ರಾಮಗಳು ಬರುತ್ತವೆ. ಇಲ್ಲಿ ಉಪಕೇಂದ್ರ ಇರುವುದರಿಂದ ಜನರಿಗೆ ಅನುಕೂಲವಾಗುತ್ತದೆ ಎಂಬ ಭಾವ ಬೊರ್ಡ್ ನೋಡಿದ ಜನರಲ್ಲಿ ಬರುತ್ತದೆ. ಆದರೆ ಸಿಬ್ಬಂದಿಯೇ ಇಲ್ಲವೆಂದರೆ ಅನುಕೂಲವಾಗುವುದೆಲ್ಲಿ? ಎಂಬುದು ಗ್ರಾಮಸ್ಥರ ಪ್ರಶ್ನೆ.

 ಸಿಬ್ಬಂದಿ ಕೊರತೆ: ಮಂಗಳಗುಡ್ಡ ಗ್ರಾಮದಲ್ಲಿ ನಿರ್ಮಿಸಿರುವ ಆರೋಗ್ಯ ಉಪ ಕೇಂದ್ರವು ಪಟ್ಟದಕಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲಿದ್ದು, ಪಟ್ಟದಕಲ್ಲ ಆರೊಗ್ಯ ಕೇಂದ್ರದಲ್ಲಿ ಮೂವರು ಸಿಬ್ಬಂದಿ ಕೊರತೆ ಇದ್ದು, ಇರುವ ಇಬ್ಬರು ಸಿಬ್ಬಂದಿಯಿಂದಲೇ ಈ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಿರಬಡಗಿ, ಲಾಯದಗುಂದಿ, ಮಂಗಳಗುಡ್ಡ ಗ್ರಾಮಗಳಿಗೆ ಸೇವೆ ನೀಡಲಾಗುತ್ತಿದೆ. ಇದರಲ್ಲಿ ಎರಡು ಗ್ರಾಮಗಳಿಗೆ ಒಬ್ಬರು, ಇನ್ನೊಂದು ಗ್ರಾಮಕ್ಕೆ ಒಬ್ಬರನ್ನು ನಿಯೋಜಿಸಲಾಗಿದೆ ಎಂಬುದು ವೈದ್ಯರ ವಿವರಣೆ.

ಕೂಡಲೇ ಆರೋಗ್ಯ ಉಪಕೇಂದ್ರಕ್ಕೆ ಸಿಬ್ಬಂದಿ ಒದಗಿಸಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸಬೇಂಕೆಂಬುದು ಗ್ರಾಮಸ್ಥರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net