

ಅಥಣಿ ಗ್ರಾಮೀಣ: ಪುಣ್ಯಕ್ಷೇತ್ರಕ್ಕೆ ಹೋಗಿ ಸ್ನಾನ ಮಾಡಿದರೆ ದೇಹದಲ್ಲಿರುವ ಕಲ್ಮಶ ದೂರವಾಗುವುದಿಲ್ಲ. ಮನಸ್ಸನ್ನು ಸ್ವಚ್ಛವಾಗಿಸಿಕೊಂಡಾಗ ಮಾತ್ರ ಕಲ್ಮಶ ದೂರವಾಗುತ್ತದೆ ಎಂದು ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ನುಡಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನೆ, ಶಿವಲಿಂಗ, ನಂದಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜೀವನದಲ್ಲಿ ಜಾತಿ, ಮತ, ಪಂಥಕ್ಕಿಂತ ಭಕ್ತಿ ಮುಖ್ಯವಾಗಿದೆ. ಕರ್ಮಕ್ಕೆ-ಫಲ ಬಯಸಬಾರದು. ಎಷ್ಟೇ ದೊಡ್ಡವರಾದರೂ ಆಚಾರ-ವಿಚಾರ ಮರೆಯಬಾರದು ಎಂದರು.
ಯಕ್ಕಂಚಿಯ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ಕಾರ್ಯ ಬೇಡಿಕೆ ಮತ್ತು ಪ್ರತಿ ಫಲದಾಯಕ ವೃತ್ತಿಯಾಗಿದೆ. ಯುವಕರು ಮೊಬೈಲ್ ಬಳಕೆ ಕಡಿಮೆಗೊಳಿಸಿ, ಕಲೆ ಹಾಗೂ ಸಂಸ್ಕೃತಿ ಉಳಿಸುವತ್ತ ಗಮನಹರಿಸಬೇಕು ಎಂದರು.
ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ ಮಾತನಾಡಿದರು. ಬಾಳಕೃಷ್ಣ ಮಹಾರಾಜರ ಸಂಗೀತ ಬಳಗದಿಂದ ಸಂಗೀತ ಸುಧೆ ಜರುಗಿತು. ಮಧ್ಯಾಹ್ನ ಕಳಸ ಮತ್ತು ನಂದಿ, ಶಿವಲಿಂಗ ಮೂರ್ತಿಗಳನ್ನು ಬರಮಾಡಿಕೊಂಡು ಕುಂಭಾರತಿ ಹಿಡಿದ ಸುಮಂಗಲೆಯರು ಹಾಗೂ ವಿವಿಧ ಕಲಾ ತಂಡದೊಂದಿಗೆ ಗ್ರಾಮದಲ್ಲಿ ನದಿ ಇಂಗಳಗಾವದ ಸಿದ್ಧಲಿಂಗ ಸ್ವಾಮೀಜಿ, ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಅಥಣಿಯ ಮರುಳಸಿದ್ಧ ಸ್ವಾಮೀಜಿಯನ್ನು ಮೆರವಣಿಗೆ ಮಾಡಲಾಯಿತು.
ಮುಖಂಡರಾದ ಶಾಂತಿನಾಥ ನಂದೇಶ್ವರ, ಅಪ್ಪುಗೌಡ ನೇಮಗೌಡ, ಸೈಬಣ್ಣ ಕಮತಗಿ, ಅಶೋಕ ಮಗದುಮ್ಮ, ಗುರುಪಾದ ಸವದಿ, ಬಸಪ್ಪ ಗಣಿ, ಬಸಪ್ಪ ಮಗದುಮ್ಮ, ಬಾಪು ಗಸ್ತಿ, ಮಲ್ಲಪ್ಪ ಸೊನ್ನದ ಇತರರಿದ್ದರು. ವಿಶ್ವನಾಥ ಕಂಬಾಗಿ ಸ್ವಾಗತಿಸಿದರು. ಪಿ.ಎಲ್.ಪೂಜಾರಿ ನಿರೂಪಿಸಿದರು.