ಫಲ ಪುಷ್ಪ ಪ್ರದರ್ಶನ ಸಚಿವ ಕೆ.ಎನ್.ರಾಜಣ್ಣ ಉದ್ಘಾಟನೆ

ಫಲ ಪುಷ್ಪ ಪ್ರದರ್ಶನ ಸಚಿವ ಕೆ.ಎನ್.ರಾಜಣ್ಣ ಉದ್ಘಾಟನೆ
Published on

ಹಾಸನ: ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಸಿಲ್ವರ್ ಜುಬ್ಲಿ ಅರ್ಚರ್ಡ್ ಪಾರ್ಕ್‌ನಲ್ಲಿ ಜ.26 ರಿಂದ 28ರವರೆಗೆ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಉದ್ಘಾಟಿಸಿ ನಂತರ ತೋಟಗಾರಿಕೆ ಪಿತಾಮಹ ಮರಿಗೌಡ ಅವರ ಪುತ್ಥಳಿ ಅನಾವರಣಗೊಳಿಸಿದರು.
ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸಚಿವರು, ಕಳೆದ 5 ವರ್ಷಗಳಿಂದ ನಿಂತು ಹೊಗಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಶಾಸಕರು ಹಾಗೂ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಿ ತುಂಬಾ ಚೆನ್ನಾಗಿ ಆಯೋಜಿಸಿದ್ದಾರೆ. ಹೇಮಾವತಿ ತೋಟಗಾರಿಕೆ ಸಂಘ ಕೂಡ ಸೇರಿಕೊಂಡಿದ್ದಾರೆ. ಹೆಣ್ಣು ಮಕ್ಕಳು ತುಂಬಾ ಆಸಕ್ತಿ ವಹಿಸಿ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಫಲಪುಷ್ಪ ಪ್ರದರ್ಶನದ ಗುಣಮಟ್ಟವನ್ನು ಇನ್ನು ಹೆಚ್ಚು ಉತ್ತಮ ಪಡಿಸಲು ಹಾಗೂ ಸಾರ್ವಜನಿಕರ ಪಾಲ್ಗೊಳುವಿಕೆಯನ್ನು ಹೆಚ್ಚಿಸಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಆಶಯವಿದೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರೆಲ್ಲರ ಸಹಕಾರ ಪಡೆದು ಪ್ರತಿ ವರ್ಷ ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟುವಂತೆ ಆಯೋಜಿಸಬೇಕು. ಇದು ರೈತರಿಗೆ ಅನುಕೂಲವಾಗುತ್ತದೆ. ನಾವು ಕೂಡ ರೈತ ಕುಟುಂಬದಲ್ಲಿ ಬೆಳೆದಿದ್ದರೂ ಸಹ ಇಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ತಳಿಗಳ ಹೂವುಗಳ ಮಾಹಿತಿ ಇರಲ್ಲಿಲ್ಲ ಎಂದರು.
ಈ ಪ್ರದರ್ಶನ ರೈತರಿಗೆ ಬಹಳ ಉಪಯೋಗವಾಗಲಿದೆ ಎಂದ ಅವರು, ರೈತರು ರಾಗಿ, ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬಿಗೂ ಸ್ವಲ್ಪ ದಿನದಲ್ಲಿ ಬೆಲೆಯಿಲ್ಲದಂತೆ ಆಗುತ್ತದೆ. ಅದೃಷ್ಟಕ್ಕೆ ಕಬ್ಬಿನ ಜೂಸ್‌ನಿಂದ ಎಥೆನಾಲ್ ಮಾಡುವುದರಿಂದ ಬ್ಲೆಂಡಿಂಗ್‌ಗೆ ಅನುಮತಿ ನೀಡಿ ಅದಕ್ಕೆ 54 ರೂ. ಸಿಗುತ್ತದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಕಡಿಮೆ ನೀರಿನಲ್ಲಿ ಉತ್ತಮವಾಗಿ ತರಕಾರಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗಿ ಮಾಹಿತಿ ನೀಡುತ್ತಿದ್ದಾರೆ. ಇದು ಒಂದು ಉತ್ತಮ ಕಾರ್ಯ ಎಂದು ತಿಳಿಸಿದರು.
ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net