ಫಯಾಜ್‌ಗೆ ಗಲ್ಲಿಗೇರಿಸಲು ಆಗ್ರಹ

3004Klb05
Published on

ಕಲಬುರಗಿ: ಹುಬ್ಬಳ್ಳಿಯ ಬಿಯುಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಲವ್ ಜಿಹಾದ್ ಕಾರಣಕ್ಕೆ ಭೀಕರ ಹತ್ಯೆ ಮಾಡಿರುವ ಫಯಾಜ್‌ನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ನಗರದ ಗುರುಕುಲ ಕಾಲೇಜಿನಲ್ಲಿ ಮಂಗಳವಾರ ಸಹಿ ಸಂಗ್ರಹ ಅಭಿಯಾನ ನಡೆಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಮಾತನಾಡಿ, ನೇಹಾ ಹಿರೇಮಠ ಹತ್ಯೆಯಾದ ದಿನದಿಂದ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಎಬಿವಿಪಿ ಸೇರಿ ಇತರ ಸಂಘಟನೆಗಳ ಹೋರಾಟ, ಒತ್ತಡ ಮಣಿದು ಸಿಐಡಿಗೆ ವಹಿಸಿ, ದಾರಿ ತಪ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಪ್ರಕರಣದ ಹಿಂದೆ ಲವ್ ಜಿಹಾದ್‌ನಂತಹ ಷಡ್ಯಂತ್ರ ಇರುವುದು ಗೋಚರವಾಗುತ್ತಿದೆ. ಆದ್ದರಿಂದ ಪ್ರಕರಣದ ಹಿಂದಿನ ಜಾಲವನ್ನು ಭೇದಿಸಲು ಸಿಬಿಐ ತನಿಖೆಗೆ ವಹಿಸಬೇಕು. ಗಲ್ಲು ಶಿಕ್ಷೆ ಆಗುವ ರೀತಿ ಪ್ರಕರಣವನ್ನು ತೆಗೆದುಕೊಂಡು ಹೋಗಬೇಕು ಎಂದು ಆಗ್ರಹಿಸಿದರು. ಎಬಿವಿಪಿ ನಗರ ಕಾರ್ಯದರ್ಶಿ ಶಾಂತಕುಮಾರ, ಶಿವಾನಿ ಕುಮಾರಿ, ಅರುಣ, ದಿಲೀಪಕುಮಾರ, ಸಂತೋಷ ಮಹಾಮನಿ, ರಮೇಶ, ಮನೋಜ, ತರುಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net