ಫ.ಗು.ಹಳಕಟ್ಟಿಯವರ ಶ್ರಮ, ಶ್ರದ್ಧೆ ಮಾದರಿ

7 bdvt 6
ಭದ್ರಾವತಿಯಲ್ಲಿ ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಹಿರೇನಲ್ಲೂರು ಎಚ್.ಎಸ್.ವೀರಸಂಗಪ್ಪ ದತ್ತಿ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಉದ್ಘಾಟಿಸಿದರು. ಡಾ. ಬಿ.ಜಿ.ಧನಂಜಯ, ಕತ್ತಲಗೆರೆ ತಿಮ್ಮಪ್ಪ , ಗಂಗಾ ಕುಬ್ಸದ್, ಮಲ್ಲಿಕಾಂಬಾ ಇತರರಿದ್ದರು.
Published on

ಭದ್ರಾವತಿ: ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರು ಬಸವಾದಿ ಶಿವಶರಣ ವಚನ ಸಾಹಿತ್ಯಗಳ ಸಾರವನ್ನು ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸಿದ ಪರಿಣಾಮ ಇಂದು ಬಹಳಷ್ಟು ವಚನಕಾರರ ಇತಿಹಾಸ ತಿಳಿಯಲು ಸಾಧ್ಯವಾಗಿದೆ. ಇದರ ಹಿಂದಿರುವ ಶ್ರಮ, ಶ್ರದ್ಧೆಯನ್ನು ಇಂದಿನ ಯುವಪೀಳಿಗೆ ಅನುಸರಿಸಬೇಕು ಎಂದು ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಧನಂಜಯ ತಿಳಿಸಿದರು.

ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಫ.ಗು.ಹಳಕಟ್ಟಿ ಅವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಹಿರೇನಲ್ಲೂರು ಎಚ್.ಎಸ್.ವೀರಸಂಗಪ್ಪ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಗುಜರಾತಿ ಹಾಗೂ ಮರಾಠಿ ಭಾಷೆಗಳು ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಹಳಕಟ್ಟಿ ಅವರು ಕನ್ನಡದ ಭಾಷೆಯಲ್ಲಿದ್ದ ವಚನಗಳ ಸಾರವನ್ನು ಪ್ರಚಾರ ಮಾಡಿದರು. ಇದರ ಫಲವಾಗಿ ವಚನ ಸಾಹಿತ್ಯವು ಇಂದು ಕನ್ನಡ ಭಾಷೆಗೆ ತಳಹದಿಯಾಗಿ ಗ್ರಂಥರೂಪದಲ್ಲಿ ಪ್ರಕಟಣೆಯಾಗಲು ಕಾರಣವಾಗಿದೆ. ಇಲ್ಲದಿದ್ದರೆ ಇಂದು ವಚನಗಳು ಸಾಮಾನ್ಯ ಜನರ ಆಡು ಭಾಷೆಗಳಲ್ಲಿ ಉಳಿದು ಜಾನಪದ ಗೀತೆಗಳಾಗುತ್ತಿದ್ದವು. ಇಂತಹ ಮಹಾನ್ ದಾರ್ಶನಿಕರ, ವಚನಕಾರರ ತತ್ವ, ಆದರ್ಶಗಳು ಮರೆಯಾಗುತ್ತಿತ್ತು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ , ದತ್ತಿ ದಾನಿ ಕುಮಾರಪ್ಪ, ಎನ್.ಎಸ್.ಮಲ್ಲಿಕಾರ್ಜುನಯ್ಯ, ಗಂಗಾ ಕುಬ್ಸದ್, ಮಲ್ಲಿಕಾಂಬಾ, ವಿರೂಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net