ಪ್ಲಾಸ್ಮಾ ದಾನದಲ್ಲಿ ಅನಂತಕುಮಾರ!

h1-anantkumar bugadi
Published on

ಹುಬ್ಬಳ್ಳಿ: ರಕ್ತದಾನ ಮಾಡುವುದಕ್ಕೇ ಹಿಂಜರಿಯುವವರೇ ಹೆಚ್ಚು. ಆದರೆ, ಧಾರವಾಡದ ಗುತ್ತಿಗೆದಾರರೊಬ್ಬರು 6 ಸಲ ಪ್ಲಾಸ್ಮಾ ದಾನ ಮಾಡಿದ್ದಾರೆ. ಎರಡು ಸಲ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರೂ ಇಂತಹ ಮಾನವೀಯ ಸಾಹಸ ಮೆರೆದಿದ್ದಾರೆ!

ಧಾರವಾಡ ಕೆ.ಸಿ. ಪಾರ್ಕ್ ನಿವಾಸಿ, 37 ವರ್ಷದ ಅನಂತಕುಮಾರ ಬುಗಡಿ ಅವರು ಪ್ಲಾಸ್ಮಾ ದಾನ ಶೂರ. ಪಿಡಬ್ಲ್ಯುಡಿ, ಅರಣ್ಯ, ಮಹಾನಗರ ಪಾಲಿಕೆ ಕರೆಯುವ ಟೆಂಡರ್​ನಲ್ಲಿ ಭಾಗವಹಿಸಿ ಕಾಮಗಾರಿಗಳನ್ನು ಗುತ್ತಿಗೆ ಪಡೆಯುತ್ತಿದ್ದಾರೆ. ಜತೆಗೆ ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಸಂಚಾಲಕರಾಗಿದ್ದಾರೆ.

2020ರ ಮೇ ಹಾಗೂ ಡಿಸೆಂಬರ್​ನಲ್ಲಿ ಇವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಒಂದು ಸಲ ಪಾಸಿಟಿವ್ ಬಂದ ವ್ಯಕ್ತಿ, ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಸ್ವಯಂರಕ್ಷಣೆ ಮಾಡಿಕೊಳ್ಳುತ್ತಾನೆ. ಆದರೆ, ಇವರಿಗೆ ಎರಡು ಸಲ ಪಾಸಿಟಿವ್ ಬಂದಿದ್ದರೂ 6 ಸಲ ಪ್ಲಾಸ್ಮಾ ದಾನ ಮಾಡಿ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ಲಾಸ್ಮಾ ಕೊಟ್ಟವರ ಪಟ್ಟಿಯಲ್ಲಿ ಸೇರಿದ್ದಾರೆ.

ಪ್ರತಿ ಸಲ ಕೂಡ 500 ಎಂಎಲ್ ಪ್ಲಾಸ್ಮಾ ಕೊಟ್ಟಿದ್ದಾರೆ. ಅಂದರೆ ಇದುವರೆಗೆ ಒಟ್ಟು 3000 ಎಂಎಲ್ ಪ್ಲಾಸ್ಮಾ ಕೊಟ್ಟಿದ್ದಾರೆ. ಇನ್ನೂ ಕೊಡುವ ಮನಸ್ಸಿದೆ. ಸಮಯ ನೋಡಿ ಹಾಗೂ ವೈದ್ಯರ ಸಲಹೆ ಆಧರಿಸಿ ಕೊಡಲು ತೀರ್ವನಿಸಿದ್ದಾರೆ. ರಾಜ್ಯ ಸರ್ಕಾರ ಕೊಡಮಾಡುವ ಪ್ರೋತ್ಸಾಹಧನದ ಚೆಕ್ 5 ಸಾವಿರ ರೂಪಾಯಿ ಒಂದು ಸಾರಿ ಪಡೆದಿದ್ದಾರೆ. ಅದು ಬಿಟ್ಟರೆ ಸ್ವಯಂ ಪ್ರೇರಣೆಯಿಂದ ಪ್ಲಾಸ್ಮಾ ದಾನ ಮಾಡಿದ್ದಾರೆ.

ಮೊದಲು ರಕ್ತದಾನ ಮಾಡುತ್ತಿದ್ದೆ. ಕೋವಿಡ್ ಬಂದ ನಂತರ ಪ್ಲಾಸ್ಮಾ ನೀಡುವ ತೀರ್ಮಾನ ಮಾಡಿದೆ. ಪ್ಲಾಸ್ಮಾ ದಾನ ಮಾಡುವುದರಿಂದ ಇಬ್ಬರ ಜೀವ ಉಳಿಸಬಹುದು ಎನ್ನುವುದು ನನ್ನ ನಂಬಿಕೆ. ಕೋವಿಡ್ ಸೋಂಕಿನಿಂದ ಮುಕ್ತರಾದವರು ದಾನ ಮಾಡಿ.| ಅನಂತಕುಮಾರ ಬುಗಡಿ

ಪ್ಲಾಸ್ಮಾ ದಾನ ಮಾಡಿದವರು

ಇವರು ಹೆಚ್ಚು ಸಲ ಪ್ಲಾಸ್ಮಾ ಕೊಟ್ಟವರು. ಪ್ರತಿ ಸಲ ದಾನ ಮಾಡುವಾಗ ಅವರಲ್ಲಿರುವ ರೋಗನಿರೋಧಕ ಶಕ್ತಿಯನ್ನು ದೃಢಪಡಿಸಿಕೊಳ್ಳಲಾಗುವುದು. ನಂತರ ಅವರಿಗೆ ದಾನ ಮಾಡುವಂತೆ ತಿಳಿ ಹೇಳಲಾಗುವುದು. ಅನಂತಕುಮಾರ ಅವರಲ್ಲಿ ಪ್ರತಿರೋಧಕ ಶಕ್ತಿ ಚೆನ್ನಾಗಿದೆ.| ಮೆಡಿಸಿನ್ ವಿಭಾಗದ ಡಾ. ರಾಮ ಕೌಲಗುಡ್ಡ, ಪ್ಯಾಥಾಲಜಿ ವಿಭಾಗದ ಡಾ. ಕವಿತಾ ಏವೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net