

ಹುಬ್ಬಳ್ಳಿ: ರಾಜ್ಯದಲ್ಲಿಯೇ ಪ್ರಥಮ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ಕೈಗೊಂಡಿದ್ದು ಇಲ್ಲಿನ ಕಿಮ್್ಸ ಆಸ್ಪತ್ರೆ. ಈಗ ರಾಜ್ಯದಲ್ಲೇ ಅತಿಹೆಚ್ಚು ಜನರಿಗೆ ಇಂತಹ ಚಿಕಿತ್ಸೆ ನೀಡಿದ ಹೆಮ್ಮೆ ಕೂಡ ಇದರದ್ದಾಗಿದೆ. ಮೊದಲ ಮತ್ತು ಎರಡನೇ ಅಲೆ ಸೇರಿ ಒಟ್ಟು 135 ಜನರಿಗೆ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ಇಲ್ಲಿ ನಡೆಸಲಾಗಿದೆ.
ಮೊದಲ ಅಲೆಯಲ್ಲಿ 108, ಎರಡನೇ ಅಲೆಯಲ್ಲಿ 27 ಜನರಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿದೆ. ಹೊರ ಜಿಲ್ಲೆಯ 21 ಜನರು ಹಾಗೂ ಧಾರವಾಡ ಜಿಲ್ಲೆಯ 114 ಮಂದಿ ಪ್ಲಾಸ್ಮಾ ಥೆರಪಿಯಿಂದ ಕರೊನಾ ಸೋಂಕು ಮುಕ್ತರಾಗಿದ್ದಾರೆ.
ಪ್ಲಾಸ್ಮಾ ಥೆರಪಿಯನ್ನು ಈಗಾಗಲೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತನ್ನ ಟ್ರೀಟ್ಮೆಂಟ್ ಪ್ರೊಟೊಕಾಲ್ನಿಂದ ಕೈಬಿಟ್ಟಿದೆ. ಆದರೂ ಕಿಮ್ಸ್ನಲ್ಲಿ ನಿಯೋಜಿಸಲಾಗಿರುವ ತಜ್ಞರ ಸಮಿತಿ ಒಪ್ಪಿಗೆ ಪಡೆದು ಥೆರಪಿ ನಡೆಸಲಾಗುತ್ತಿದೆ. ಸಮಿತಿಯಲ್ಲಿ ಶ್ವಾಸಕೋಶಶಾಸ್ತ್ರ, ಮೆಡಿಸಿನ್ ವಿಭಾಗದವರು ಇದ್ದಾರೆ. ಇವರು ಕರೊನಾ ಸೋಂಕಿತರ ಜತೆಗೆ ರ್ಚಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ತಿಂಗಳಲ್ಲಿ ಮೂರು ಇಲ್ಲವೇ ನಾಲ್ವರಿಗೆ ಪ್ಲಾಸ್ಮಾ ಥೆರಪಿ ನಡೆಸಿ ಸೋಂಕಿತರನ್ನು ಗುಣವಾಗಿಸಲು ತೀರ್ವನಿಸಲಾಗಿದೆ. ಬೇರೆ ಕೇಂದ್ರಗಳಿಗೆ ಹೋಲಿಸಿದರೆ, ಕಿಮ್ಸ್ನಲ್ಲಿ ಥೆರಫಿಗೆ ಒಳಗಾದವರು ಗುಣವಾಗಿದ್ದೇ ಹೆಚ್ಚು ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗುತ್ತಿದೆ.
ಹೀಗಿದೆ ಟ್ರೀಟ್ವೆುಂಟ್...
ಕೋವಿಡ್ ಸೋಂಕಿನಿಂದ ಗುಣವಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇವರ ರಕ್ತದಲ್ಲಿನ ದುಗ್ಧರಸ (ರಕ್ತದಲ್ಲಿರುವ ಪಾರದರ್ಶಕ ದ್ರವ)ವನ್ನು ಪಡೆದು ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣವಾದ ಒಬ್ಬ ವ್ಯಕ್ತಿಯಿಂದ ಪ್ಲಾಸ್ಮಾ ತೆಗೆದು, ಇಬ್ಬರು ಸೋಂಕಿತರಿಗೆ ತಲಾ ಒಂದು ಡೋಸ್ನಂತೆ (200 ಎಂಎಲ್) ದುಗ್ದರಸವನ್ನು ಸೇರಿಸಲಾಗುತ್ತದೆ. ಇದರಿಂದ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಪ್ರತಿರೋಧ ಕಣ ನೀಡಿ, ಸೋಂಕು ನಿವಾರಣೆ ಮಾಡಬಹುದು. ಪ್ಲಾಸ್ಮಾ ಕೊಡುವವರು ಮತ್ತು ಪಡೆಯುವವರ ರಕ್ತದ ಮಾದರಿ ಸಮವಾಗಿರಬೇಕು. ಇದುವೇ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ ಕಿಮ್್ಸ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥಡಾ. ಪುರುಷೋತ್ತಮ ರೆಡ್ಡಿ.
ಕಿಮ್ಸ್ನಲ್ಲಿ ಅತಿ ಹೆಚ್ಚು ಪ್ಲಾಸ್ಮಾ ಥೆರಪಿ ನೆರವೇರಿಸಲಾಗಿದೆ. ಎರಡನೇ ಅಲೆಯ ಸೋಂಕಿತರು ಕೊಟ್ಟ ಪ್ಲಾಸ್ಮಾವನ್ನು ಬಳಸಿ ಥೆರಪಿ ನಡೆಸಲಾಗಿದೆ. ಐಸಿಎಂಆರ್ ತನ್ನ ಟ್ರೀಟ್ಮೆಂಟ್ ಪ್ರೊಟೊಕಾಲ್ನಿಂದ ಥೆರಪಿಯನ್ನು ಕೈಬಿಟ್ಟಿದೆ. ಆದರೆ, ತಜ್ಞರ ಸಮಿತಿಯನ್ನು ರಚಿಸಿದ್ದು, ಅವರು ಯಾರಿಗೆ ಅಗತ್ಯವಿದೆ ಎಂದು ಹೇಳುವರೋ ಅಂಥವರಿಗೆ ಥೆರಪಿ ನಡೆಸಲು ತೀರ್ವನಿಸಲಾಗಿದೆ.| ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ
8 ವೈದ್ಯರ ಚೇತರಿಕೆ
8 ಜನ ವೈದ್ಯರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರು ತೀವ್ರ ತರಹದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಂಕಿತ ವೈದ್ಯರು ತಾವೇ ಮುಂದು ಬಂದು ಪ್ಲಾಸ್ಮಾ ಥೆರಪಿ ಮಾಡಿಸಿಕೊಂಡಿದ್ದರು. ಇವರೆಲ್ಲ ಗುಣವಾಗಿದ್ದಾರೆ. ಮೊದಲು ಪ್ಲಾಸ್ಮಾ ಕೊಡಲು ಹಾಗೂ ಪ್ಲಾಸ್ಮಾ ಥೆರಫಿಗೆ ಒಳಗಾಗಲು ಜನರು ಹಿಂಜರಿಯುತ್ತಿದ್ದರು. ಕ್ರಮೇಣವಾಗಿ ಮುಂದೆ ಬಂದರು. ಈ ಸಾಲಿನಲ್ಲಿ ವೈದ್ಯರೂ ಇದ್ದಾರೆ.
ಮೊದಲ ಅಲೆಯಲ್ಲಿ 67 ಹಾಗೂ ಎರಡನೇ ಅಲೆಯಲ್ಲಿ 14 ಜನರು ಪ್ಲಾಸ್ಮಾ ದಾನ ಮಾಡಿದ್ದರು. ಪ್ಲಾಸ್ಮಾ ಥೆರಪಿಗೆ ಒಳಗಾಗುವ ಸೋಂಕಿತರಿಗೆ 200 ಎಂಎಲ್ ಪ್ಲಾಸ್ಮಾವನ್ನು ಬಳಕೆ ಮಾಡಲಾಗುತ್ತದೆ. ಐಸಿಎಂಆರ್ ನಿಯಮದನ್ವಯ ಸದ್ಯ ಪ್ಲಾಸ್ಮಾ ಸಂಗ್ರಹವನ್ನು ಕೈಬಿಡಲಾಗಿದೆ.| ಡಾ. ಕವಿತಾ ಏವೂರ ಪ್ಲಾಸ್ಮಾ ಥೆರಪಿ ನೋಡಲ್ ಅಧಿಕಾರಿ
22 ಜನರ ಸಾವು
ಪ್ಲಾಸ್ಮಾ ಥೆರಫಿ ನೆರವೇರಿದ್ದರೂ 22 ಜನರು ಮೃತಪಟ್ಟಿದ್ದಾರೆ. 7 ಜನರು ಧಾರವಾಡ ಜಿಲ್ಲೆಯವರಾಗಿದ್ದರೆ, ಉಳಿದವರು ಬೇರೆ ಬೇರೆ ಜಿಲ್ಲೆಯಿಂದ ಆಗಮಿಸಿದ್ದ ಕರೊನಾ ಸೋಂಕಿತರು. ಎಲ್ಲ ರೀತಿಯ ಚಿಕಿತ್ಸೆ ನೀಡಿದ ಬಳಿಕವೂ ಇವರನ್ನು ಪ್ಲಾಸ್ಮಾ ಥೆರಪಿಗೆ ಒಳಪಡಿಸಲಾಗಿತ್ತು. ಆದರೂ ಇವರು ಬದುಕುಳಿಯಲ್ಲಿಲ್ಲ ಎನ್ನುತ್ತಾರೆ ವೈದ್ಯರು.