ಪ್ಲಾಸ್ಮಾ ಥೆರಪಿಗೆ ರೂಪುರೇಷೆ ಸಿದ್ಧ

h8-Super Speciality
Published on

ಮರಿದೇವ ಹೂಗಾರ ಹುಬ್ಬಳ್ಳಿ

ಕರೊನಾ ಸೋಂಕು ನಿವಾರಣೆಗೆ ತಜ್ಞ ವೈದ್ಯರು ಕಂಡುಕೊಂಡ ಕುತೂಲಹದ ‘ಪ್ಲಾಸ್ಮಾ ಥೆರಪಿ’ ರಾಜ್ಯದಲ್ಲಿ ನಡೆಯಲಿದೆ. ಅದನ್ನು ನಡೆಸಲು ಇಲ್ಲಿಯ ಕಿಮ್ಸ್​ಗೆ ಐಸಿಎಂಆರ್ (ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್) ಅನುಮತಿ ನೀಡಿದೆ. ಇದರಿಂದ ಹೇಗೆಲ್ಲ ಥೆರಪಿ ನಡೆಸಬೇಕು ಎಂಬ ಚಿಂತನೆ, ರೂಪುರೇಷೆಗಳು ತಜ್ಞ ವೈದ್ಯರಿಂದ ಸಿದ್ಧಗೊಳ್ಳುತ್ತಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ತಜ್ಞ ವೈದ್ಯರು ನೀಡುತ್ತಿರುವ ಸಲಹೆಗಳನ್ನು ಆಧರಿಸಿ ಕಿಮ್ಸ್​ನಲ್ಲಿಯೇ ರೂಪುರೇಷೆ ಹೆಣೆಯಲಾಗುತ್ತಿದೆ. ಇದಕ್ಕಾಗಿಯೇ ನವನಗರದ ಕ್ಯಾನ್ಸರ್ ಆಸ್ಪತ್ರೆ, ಧಾರವಾಡದ ಎಸ್​ಡಿಎಂ ಆಸ್ಪತ್ರೆ, ಕಿಮ್ಸ್​ನ ಮೆಡಿಸಿನ್ ವಿಭಾಗದ ಡಾ. ರಾಮು ಕವಲಗುಡ್ಡ, ಪ್ಯಾಥಾಲಜಿ ವಿಭಾಗದ ಡಾ. ಪುರುಷೋತ್ತಮ ರೆಡ್ಡಿ, ಅರಿವಳಿಕೆ ಸೇರಿ ವಿವಿಧ ತಜ್ಞ ವೈದ್ಯರ ತಂಡ ರಚಿಸಲು ನಿರ್ಧರಿಸಲಾಗಿದೆ.

ಧಾರವಾಡ ಹೊಸಯಲ್ಲಾಪುರದ ಪ್ರಥಮ ಸೋಂಕಿತ ವ್ಯಕ್ತಿ ಗುಣಮುಖನಾಗಿ ಮನೆಗೆ ತೆರಳಿದ್ದು, ಅವರು ಪ್ಲಾಸ್ಮಾ ಥೆರಪಿಗೆ ರಕ್ತದಾನ ಮಾಡುವುದಾಗಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿ ಗುಣಮುಖವಾಗಿ 28 ದಿನ ಕಳೆದಿರಬೇಕು. ಅಂಥವರು ಸ್ವಯಂ ಪ್ರೇರಣೆಯಿಂದ ದುಗ್ಧ ರಸ ನೀಡಲು ಮುಂದೆ ಬರಬೇಕು. ಅವರು ಕೊಡುವ ರಕ್ತವನ್ನು, ಅದೇ ರಕ್ತದ ಮಾದರಿ ಹೊಂದಿದವರಿಗೆ ನೀಡಬೇಕು. ಇದಕ್ಕೆ ಎರಡೂ ಕಡೆಯಿಂದ ಒಪ್ಪಿಗೆ ಇರಬೇಕು. ಇಲ್ಲವಾದರೆ ಈ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಸುವುದು ಅನುಮಾನ ಎಂದು ವೈದ್ಯರೊಬ್ಬರು ತಿಳಿಸಿದರು.

ಏನಿದು ಪ್ಲಾಸ್ಮಾ ಥೆರಪಿ?: ಕೋವಿಡ್ 19ರಿಂದ ಗುಣಮುಖ ಹೊಂದಿದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇವರ ರಕ್ತದಲ್ಲಿನ ದುಗ್ಧರಸ (ರಕ್ತದಲ್ಲಿರುವ ಪಾರದರ್ಶಕ ದ್ರವ)ವನ್ನು ಪಡೆದು ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದ ಎರಡು ಡೋಸ್ ತೆಗೆದು, ಇಬ್ಬರು ಸೋಂಕಿತರಿಗೆ ತಲಾ ಒಂದು ಡೋಸ್​ನಂತೆ ದುಗ್ಧ ರಸ ಸೇರಿಸಲಾಗುತ್ತದೆ. ಇದರಿಂದ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಪ್ರತಿರೋಧ ಕಣ ಹೆಚ್ಚಿ, ಸೋಂಕು ನಿವಾರಣೆ ಮಾಡಬಹುದು. ಇದುವೇ ಪ್ಲಾಸ್ಮಾ ಥೆರಪಿ. ಆದರೆ, ಕೊಡುವ ಮತ್ತು ಪಡೆಯುವ ಇಚ್ಛೆ ಇಬ್ಬರಲ್ಲೂ ಇರಬೇಕು. ಸೋಂಕಿನಿಂದ ಗುಣಮುಖರಾದವರು ಮುಂದೆ ಬಂದರಷ್ಟೇ ಸಾಧ್ಯ ಎನ್ನುತ್ತಾರೆ ಕಿಮ್ಸ್​ನ ವೈದ್ಯರು.

ಈಗಾಗಲೇ ತಜ್ಞ ವೈದ್ಯರ ತಂಡ ರಚನೆ ಮಾಡಲಾಗಿದೆ. ನವನಗರದ ಕ್ಯಾನ್ಸರ್ ಆಸ್ಪತ್ರೆ, ಧಾರವಾಡದ ಎಸ್​ಡಿಎಂ ಆಸ್ಪತ್ರೆಯ ವೈದ್ಯರ ತಂಡ ನಮ್ಮ ಜೊತೆ ಕೈಜೋಡಿಸಲಿದೆ. ಆದರೆ, ಸೋಂಕಿನಿಂದ ಗುಣಮುಖರಾದವರು ದುಗ್ಧರಸ ನೀಡಬೇಕು. ಹಾಗೆಯೇ ಪ್ರತಿರೋಧ ಕಣ ಪಡೆಯಲು ಸೋಂಕಿತರೂ ಒಪ್ಪಬೇಕು. ಕಾಲಕಾಲಕ್ಕೆ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಈ ವಿಷಯದಲ್ಲಿ ಪಾಲಿಸಲಾಗುತ್ತದೆ.| ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net