

ಹಾಸನ: ಪ್ಲಾಸ್ಟಿಕ್‌ಮುಕ್ತ ಸ್ವಚ್ಛ ನಗರ ನಿರ್ಮಾಣಕ್ಕೆ ನಗರಸಭೆ ಪಣ ತೊಟ್ಟಿದ್ದು ಜು.1ರಿಂದ ಪ್ಲಾಸ್ಟಿಕ್‌ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನಗರಸಭೆ ಅಧ್ಯಕ್ಷ ಆರ್.ಮೋಹನ್ ಮನವಿ ಮಾಡಿದರು.
ನಗರದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಹಾಗೂ ಕಸದ ಹಾವಳಿಯಿಂದ ನಗರದ ಅಂದ ಹಾಳಾಗುತ್ತಿದೆ. ಆದ್ದರಿಂದ ಸ್ವಚ್ಛ ನಗರ ನಿರ್ಮಾಣಕ್ಕೆ ನಗರಸಭೆ ಮುಂದಾಗಿದ್ದು ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದು ಶನಿವಾರ ನಗರಸಭೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದರು.
ಮನೆಯ ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ, ನಗರಸಭೆ ಕಸದ ವಾಹನದಲ್ಲೇ ಹಾಕಬೇಕು. ಯಾವುದೇ ಹೋಟೆಲ್ ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ವ್ಯಾಪಾರ ಕಂಡು ಬಂದರೆ ಅಂತಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದ ಅವರು, ಗ್ರಾಹಕರು ಬಟ್ಟೆಯ ಕೈ ಚೀಲಗಳನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ನಗರಸಭೆ ಆಯುಕ್ತ ಸತೀಶ್ ಕುಮಾರ್ ಮಾತನಾಡಿ, ನಗರದಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಣ ಮಾಡುವ ಸಲುವಾಗಿ ನಗರದ ಮೂರು ಕಡೆ ಸ್ಥಳ ನಿಗದಿ ಮಾಡಿ ಬಟ್ಟೆ ಬ್ಯಾನರ್ ಮಾತ್ರ ಅಳವಡಿಸಲು ತೀರ್ಮಾನ ಮಾಡಲಾಗಿದೆ.
ನಗರದ ತಣ್ಣೀರು ಹಳ್ಳ ವೃತ್ತ, ಎನ್‌ಆರ್ ವೃತ್ತ, ಹಾಗೂ ಡೈರಿ ವೃತ್ತಗಳಲ್ಲಿ ಮಾತ್ರ ಬ್ಯಾನರ್ ಹಾಗೂ ಬಂಟಿಂಗ್ಸ್ ಅಳವಡಿಸಲು ಯೋಜಿಸಲಾಗಿದೆ. ಬಟ್ಟೆಯಿಂದ ತಯಾರಾದ ಬ್ಯಾನರ್, ಬಂಟಿಂಗ್ಸ್ ಗಳನ್ನು ಮಾತ್ರ ಅಳವಡಿಸಬಹುದಾಗಿದೆ. ಅಳವಡಿಕೆಗೂ ಮುನ್ನ ನಗರಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಗದಿತ ಶುಲ್ಕ ನೀಡಿ ನಂತರ ನಗರಸಭೆ ನಿಯಮಾನುಸಾರ ಬ್ಯಾನರ್, ಮತ್ತು ಬಂಟಿಂಗ್ಸ್ ಗಳನ್ನು ಅಳವಡಿಸಬಹುದಾಗಿದೆ ಎಂದು ಹೇಳಿದರು.