ಪ್ಲಾಸ್ಟಿಕ್​ ವಶಕ್ಕೆ ಪಡೆದ ಶಿರಾ ನಗರಸಭೆ

27 04
Published on

ಶಿರಾ: ತಾಲೂಕಿನ ಬುಕ್ಕಾಪಟ್ಟಣದಲ್ಲಿ ಇತ್ತೀಚಿಗೆ ಪಾನಿಪುರಿ ಸೇವಿಸಿದ 25 ಜನರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಶಿರಾ ನಗರಸಭೆ ಆಯುಕ್ತ ರುದ್ರೇಶ್​ ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಗ್ಗೆ ಅಂಗಡಿಗಳಿಗೆ ಭೇಟಿ ಪ್ಲಾಸ್ಟಿಕ್​ ಲೋಟ, ತಟ್ಟೆ, ಎಲೆ ಹಾಗೂ ಕ್ಯಾರಿ ಬ್ಯಾಗ್​ಗಳನ್ನು ಜಪ್ತಿ ಮಾಡಿ, ಪ್ಲಾಸ್ಟಿಕ್​

ಸಾಮಗ್ರಿಗಳನ್ನು ಮಾರದಂತೆ ಅರಿವು ಮೂಡಿಸಿದರು.

ತದನಂತರ ನಗರದ ಪ್ರಮುಖ ರಸ್ತೆಯಲ್ಲಿ ಬೀದಿಬದಿಯ ಹೋಟೆಲ್​ಗಳಿಗೆ ಭೇಟಿ ನೀಡಿ ಅಲ್ಲಿ ಉಪಯೋಗಿಸುವ ಅಡುಗೆ ಎಣ್ಣೆಯ ಗುಣಮಟ್ಟ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮಾಡುವ ಬಗೆ, ಆಹಾರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು. ವಿಷಕಾರಿ ಟೇಸ್ಟಿಂಗ್​ ಪೌಡರ್​, ಅಪಾಯಕಾರಿ ಬಣ್ಣ, ಕರಿದ ಎಣ್ಣೆಯನ್ನು ಮರುಬಳಿಕೆ ಮಾಡಿ ಉಪಯೋಗಿಸುತ್ತಿದ್ದ ಹೋಟೆಲ್​ ನವರಿಗೆ ಕಡೆಯ ಎಚ್ಚರಿಕೆ ನೀಡಿದರು. ಆಹಾರ ನೀಡಲು ಮತ್ತು ಪಾರ್ಸಲ್​ ಮಾಡಲು ಬಳಸುತ್ತಿರುವ ಪ್ಲಾಸ್ಟಿಕ್​ ವಶಪಡಿಸಿಕೊಂಡರು. ಸಾರ್ವಜನಿಕರಿಗೆ ಆಹಾರ ನೀಡುವ ಸಂದರ್ಭದಲ್ಲಿ ಬಾಳೆ ಎಲೆ ಬಳಸಿ ಎಂದು ತಿಳಿಸಿದರು. ಜಪ್ತಿ ಕಾರ್ಯಚರಣೆ ಸಂದರ್ಭದಲ್ಲಿ ಮೊದಲು ಫ್ಯಾಕ್ಟರಿಗಳಲ್ಲಿ ಪ್ಲಾಸ್ಟಿಕ್​ ಐಟಂಗಳನ್ನು ತಯಾರು ಮಾಡುವುದನ್ನು ನಿಲ್ಲಿಸಿ, ಇಲ್ಲಿಗೆ ಬಂದು ಪ್ಲಾಸ್ಟಿಕ್​ ಜಪ್ತಿ ಮಾಡಿ ಹೋಟೆಲ್​ನವರಿಗೆ ತೊಂದರೆ ಕೊಡುತ್ತಿದ್ದೀರಾ ಎಂದು ಅಧಿಕಾರಿಗಳೊಂದಿಗೆ ಕೆಲವರು ವಾಗ್ವಾದಕ್ಕೆ ನಡೆಸಿದರು. ಕಿರಿಯ ಆರೋಗ್ಯ ಸಹಾಯಕರಾದ ಜಗನ್ನಾಥ್​, ಶ್ರೀಕಾಂತ್​, ಪೌರಕಾರ್ಮಿಕರ ಗಜೇಂದ್ರ, ಮಣಿಕಂಠ, ಶಿವರಾಜು, ರಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net