

ರಾಯಚೂರು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮಗಳನ್ನು ಅರಿತುಕೊಂಡು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೇಲೂರೆ ಹೇಳಿದರು.
ಸ್ಥಳೀಯ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಜನ ಶಿಕ್ಷಣ ಸಂಸ್ಥಾನ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಏಕಬಳಕೆ ಪ್ಲಾಸ್ಟಿಕ್ ಬಳಕೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಪ್ರತಿಯೊಬ್ಬರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಪ್ರಮುಖವಾಗಿ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಕೆ ಮಾಡದೆ ಪೇಪರ್ ಅಥವಾ ಬಟ್ಟೆಯಿಂದ ತಯಾರಿಸಿದ ಚೀಲಗಳನ್ನು ಬಳಸುವ ಮೂಲಕ ಪರಿಸರ ಹಾನಿಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ದಯಾನಂದ ಬೇಲೂರೆ ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಮಾತನಾಡಿ, ಮರು ಬಳಕೆಯಾಗದೆ ಇರುವ ವಸ್ತುಗಳಿಂದ ಪರಿಸರ, ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಪ್ರಾಣಿ, ಪಕ್ಷಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಸದಾನಂದ ಪೂಜಾರಿ, ಸಹಾಯಕ ಕಾರ್ಯಕ್ರಮಾಕಾರಿ ಪೋಮಣ್ಣ, ತರಕಾರಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.