ಪ್ಲಾಸ್ಟಿಕ್ ಮಾರಾಟ ನಗರಸಭೆ ಅಧಿಕಾರಿಗಳ ದಾಳಿ: 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಪ್ಲಾಸ್ಟಿಕ್ ಮಾರಾಟ ನಗರಸಭೆ ಅಧಿಕಾರಿಗಳ ದಾಳಿ: 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ
Published on

ಹಾಸನ: ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಎರಡು ಅಂಗಡಿ ಹಾಗೂ ಗೋದಾಮುಗಳ ಮೇಲೆ ನಗರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ, ಸುಮಾರು 1 ಲಕ್ಷ ರೂ. ಮೌಲ್ಯದ 1.5 ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿಗಳಿಗೆ ದಂಡ ವಿಧಿಸಿ ಮತ್ತೊಮ್ಮೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದರು.

ನಗರಸಭೆ ಆಯುಕ್ತ ಸತೀಶ್ ನೇತೃತ್ವದಲ್ಲಿ ನಗರದ ಹಾಸನಾಂಬ ವೃತ್ತ, ಚೌಡೇಶ್ವರಿ ಬೀದಿ, ಬ್ರಾಹ್ಮಣರ ಬೀದಿಯ ಬದ್ರಿ ಮತ್ತು ಹಾಸನಂಬ ದೇವಸ್ಥಾನದ ಹಿಂಬಾಗ ರಸ್ತೆಯ ಅಲ್ಲಿರುವ ಅಕ್ಮಲ್ ಎಂಬುವರ ಅಂಗಡಿಯ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಮುಂದೆ ಪ್ಲಾಸ್ಟಿಕ್ ಬಳಸದಂತೆ ಹಾಗೂ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದರು.

ಗೋದಾಮುಗಳ ಮೇಲೂ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು. ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಿದರು.

ನಂತರ ಮಾತನಾಡಿದ ನಗರಸಭೆ ಆಯುಕ್ತ ಸತೀಶ್, ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಿದರು ಕೂಡ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಬದ್ರಿ ಎಂಬ ವ್ಯಾಪಾರಿ ಈ ಹಿಂದೆಯೂ ಪ್ಲಾಸ್ಟಿಕ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದ. ಇದೀಗ ಮತ್ತೆ ಮಾರಾಟ ಮಾಡಿದ್ದಾನೆ. ಮುಂದೆ ಪ್ಲಾಸ್ಟಿಕ್ ಮಾರಾಟ ಮಾಡುವುದಿಲ್ಲ ಎಂದು ತಪ್ಪು ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾನೆ. ಇದೇ ತಪ್ಪು ಮರುಕಳಿಸಿದರೆ ಆತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಗಳವಾರ ಸಂಜೆ ಸಂತೆ ನಡೆಯುವ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಂತಹ ಅಂಗಡಿಗಳ ಮೇಲೆ ಕೂಡ ದಾಳಿ ನಡೆಸಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net