

ಕುಶಾಲನಗರ: ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛ ಸರ್ವೇಕ್ಷಣಾ- 2023ರ ಯೋಜನೆಯಡಿ ಪ್ಲಾಸ್ಟಿಕ್ ಕಡ್ಡಾಯ ನಿಷೇಧ ಮತ್ತು ಕಸ ಬೇರ್ಪಡಿಸುವ ಮಾರ್ಗಸೂಚಿ ಹೊಂದಿರುವ ಕರಪತ್ರಗಳನ್ನು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಧ್ಯಕ್ಷ ಬಿ.ಜಯವರ್ಧನ ಬಿಡುಗಡೆಗೊಳಿಸಿದರು.
ಪಟ್ಟಣದಲ್ಲಿ ಸಂಚರಿಸಲಿರುವ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಜಯವರ್ಧನ, ಅಡುಗೆ ಮನೆ ಕಸ, ತೋಟದ ಕಸ, ಪ್ಲಾಸ್ಟಿಕ್, ಕಾಗದ ಮತ್ತಿತರ ವಸ್ತುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಉದಯಕುಮಾರ್ ಮಾತನಾಡಿ, ಇನ್ಮುಂದೆ ಕಸ ಸಂಗ್ರಹಿಸುವ ವಾಹನಕ್ಕೆ ಪ್ರತಿ ಭಾನುವಾರ ಮತ್ತು ಗುರುವಾರ ಒಣ ಕಸವನ್ನು ನಾಗರಿಕರು ನೀಡಬೇಕು. ಉಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಿಸಲಾಗುವುದು. ಬೇರ್ಪಡಿಸದೆ ನೀಡುವ ಕಸವನ್ನು ಸ್ವೀಕರಿಸುವುದಿಲ್ಲ. ನಿಯಮ ಪಾಲಿಸದಿದ್ದಲ್ಲಿ ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷೆ ಸುರಾಯಬಾನು, ಸದಸ್ಯರಾದ ಪ್ರಮೋದ್ ಮುತ್ತಪ್ಪ, ಶೈಲಾ ಕೃಷ್ಣಪ್ಪ, ಜಯಲಕ್ಷ್ಮಮ್ಮ, ರೇಣುಕಾ ಜಗದೀಶ್, ಡಿ.ಕೆ.ತಿಮ್ಮಪ್ಪ, ಎಂ.ಬಿ.ಸುರೇಶ್, ಸಿಬ್ಬಂದಿ ನಂಜುಂಡ, ಶಕೀಲ್, ಪುಷ್ಪಾ ಹಾಜರಿದ್ದರು.