ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಘಟಕ ಸ್ಥಾಪನೆಯಾಗಲಿ

31Kush01
Published on

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಈಗ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರೆ ರೀತಿಯಲ್ಲಿ ಮರುಬಳಕೆ ಮಾಡಲು ಘಟಕ ಸ್ಥಾಪಿಸಬೇಕಿದೆ ಎಂದು ಹಿರಿಯ ಪತ್ರಕರ್ತ ಚಿ.ಚಿದ್ವಿಲಾಸ್ ಸಲಹೆ ನೀಡಿದರು.

ಇಲ್ಲಿನ ವಾಸವಿ ಮಹಲ್ನಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಕುಶಾಲನಗರ ಸ್ಥಾನೀಯ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪ್ರವಾಸೋದ್ಯಮದಿಂದ ಕೊಡಗು ಜಿಲ್ಲೆಯಲ್ಲಿ ಟನ್‌ಗಟ್ಟಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹೀಗಾಗಿ ಇಂಟರ್‌ಲಾಕ್ ಟೈಲ್ಸ್ ಸೇರಿದಂತೆ ವಿವಿಧ ರೀತಿಯಲ್ಲಿ ಮರು ಉತ್ಪಾದನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಭೂಮಿ ಹಾಗೂ ಪರಿಸರಕ್ಕೂ ಒಳ್ಳೆಯದಾಗಲಿದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸುವುದನ್ನು ನಿಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಕುಶಾಲನಗರ ಭಾಗದಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತಷ್ಟು ಸದೃಢಗೊಳಿಸಬೇಕು. ಸ್ವಯಂಪ್ರೇರಿತವಾಗಿ ವರ್ತಕರು ಸದಸ್ಯತ್ವ ಪಡೆಯಬೇಕು. ಜಿಲ್ಲೆಯ ಒಟ್ಟು 18 ಸ್ಥಾನೀಯ ಸಮಿತಿಗಳು 10 ಸಮಿತಿಗಳು ಕೊಂಚ ನಿಧಾನವಾಗಿದೆ. ಅಂತಹ ಸಮಿತಿಗಳಿಗೆ ವೇಗ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮತ್ತು ಇತ್ತೀಚೆಗೆ ಪಿಎಚ್‌ಡಿ ಪದವಿ ಪಡೆದ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ಕುಶಾಲನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಅಮೃತ್‌ರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕರಾದ ಎಸ್.ಕೆ.ಸತೀಶ್, ಎಂ.ಡಿ.ರಂಗಸ್ವಾಮಿ, ಉಪಾಧ್ಯಕ್ಷರಾದ ಪಿ.ಕೆ.ಜಗದೀಶ್, ಎಂ.ಕೆ.ದಿನೇಶ್, ಕಾರ್ಯದರ್ಶಿ ರವೀಂದ್ರ.ವಿ.ರೈ, ಖಜಾಂಚಿ ಎನ್.ವಿ.ಬಾಬು, ಸಹಕಾರ್ಯದರ್ಶಿ ಕೆ.ಎಸ್.ನಾಗೇಶ್, ನಿರ್ದೇಶಕರಾದ ಜನಾರ್ದನ, ಶರ್ಮಾ, ಪಿ.ಎಂ.ಮೋಹನ್ ಇತರರು ಹಾಜರಿದ್ದರು.
ನೂತನ ಆಡಳಿತ ಮಂಡಳಿಗೆ ಆಯ್ಕೆ: ನೂತನ ಅಧ್ಯಕ್ಷರಾಗಿ ರವೀಂದ್ರ ವಿ.ರೈ ಮತ್ತು ಕಾರ್ಯದರ್ಶಿಯಾಗಿ ಕೆ.ಎಸ್.ನಾಗೇಶ್ ಅವಿರೋಧವಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net