ಪ್ಲಾಸ್ಟಿಕ್ ತ್ಯಜಿಸಿ, ಮನುಕುಲವನ್ನು ಉಳಿಸೋಣ

05rajesh4
Published on

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿವಿಧ ಮಾಲಿನ್ಯಕ್ಕೆ ಕಾರಣವಾಗಿರವ ಪ್ಲಾಸ್ಟಿಕ್‌ಅನ್ನು ತ್ಯಜಿಸುವ ಮೂಲಕ ಅರಣ್ಯ ಸಂಪತ್ತು ಮತ್ತು ಮನುಕುಲವನ್ನು ಉಳಿಸಬೇಕಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಕರೆನೀಡಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನು ಬಳಸಿ ಬಿಸಾಡಿದ, ತಿರಸ್ಕರಿಸಿದ ಅಥವಾ ಸುಟ್ಟುಹಾಕಿದ ಏಕ-ಬಳಕೆಯ ಪ್ಲಾಸ್ಟಿಕ್ ಮಾನವನ ಆರೋಗ್ಯ ಮತ್ತು ಜೀವವೈವಿಧ್ಯತೆಗೆ ಹಾನಿ ಮಾಡುತ್ತದೆ. ಪರ್ವತಗಳ ತುತ್ತ ತುದಿಯಿಂದ ಸಾಗರದ ತಳದವರೆಗೆ ಪ್ರತಿಯೊಂದು ಪರಿಸರದ ವ್ಯವಸ್ಥೆಯನ್ನು ಕಲುಷಿತಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಜಿಸಬೇಕು, ಹಾಗೆಯೇ ಸಮಸ್ಯೆಯನ್ನು ನಿಭಾಯಿಸಲು ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಹಾರಗಳನ್ನು ಕೂಡ ಕಂಡುಕೊಳ್ಳಲು ಮುಂದಾಗಬೇಕಿದೆ ಎಂದು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯನ್ನು ವಿಶ್ವದಾದ್ಯಂತ ತುಂಬಾ ಅರ್ಥಪೂರ್ಣವಾಗಿ ಆಚರಿಸುವುದರ ಜೆತೆಗೆ ಪರಿಸರವನ್ನು ಹೇಗೆ ಸಂರಕ್ಷಿಸಬೇಕು, ಪೋಷಿಸಬೇಕು ಮತ್ತು ಪರಿಸರದ ನಾಶದಿಂದಾಗುವ ಪರಿಣಾಮಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ವಿಶ್ವವಿದ್ಯಾನಿಲಯದ ಕುಲಸಚಿವ ಆರ್.ಲೋಕನಾಥ್ ಮಾತನಾಡಿ, ವಾಸ್ತವದಲ್ಲಿ ಮಾನವನು ತನ್ನ ಸ್ವಾರ್ಥ ಸಾಧನೆಗಾಗಿ ಪರಿಸರವನ್ನು ನಾಶಮಾಡುವಲ್ಲಿ ಹೆಚ್ಚು ತೊಡಗಿದ್ದಾನೆ. ಭವಿಷ್ಯದ ಪೀಳಿಗೆಯ ಬದುಕಿನ ಬಗೆಗೆ ಗಮನಹರಿಸಿ ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಜಾಗೃತನಾಗಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಜಿ.ವಿ.ವೆಂಕಟರಮಣ ಮಾತನಾಡಿ, ವಿಶ್ವಾದ್ಯಂತ ಪ್ರತಿ ವರ್ಷ 400 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪಾದಿಸಲ್ಪಡುತ್ತದೆ. ಅದರಲ್ಲಿ ಅರ್ಧದಷ್ಟು ಒಮ್ಮೆ ಮಾತ್ರ ಬಳಸಲು ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ, ಶೇ.10 ಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ವರ್ಷಕ್ಕೆ 50,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಮಾನವರೆಲ್ಲರೂ ಪರಿಸರವನ್ನು ಕಾಪಾಡುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಆರ್.ಮಹೇಶ್, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net