ಪ್ರೌಢಶಾಲಾ ಸಹ ಶಿಕ್ಷಕರ ಸಮಸ್ಯೆ ಪರಿಹರಿಸಿ

19BLK4
ಶಿಕ್ಷಕರ ಮೇಲಿನ ಒತ್ತಡ ತಗ್ಗಿಸಿ, ಗುಣಾತ್ಮಕ ಕಲಿಕೆಗೆ ಒತ್ತು ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಭಾಲ್ಕಿಯಲ್ಲಿ ಮಾಜಿ ಎಂಎಲ್‌ಸಿ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದತ್ತು ಕಾಟಕರ, ಬಾಲಾಜಿ ಕಾಂಬಳೆ, ಹಣಮಂತ ಕಾರಾಮುಂಗೆ, ಕಿರಣಕುಮಾರ ಭಾಟಸಾಂಗವಿ, ವಿಠಲರಾವ ಬಿರಾದಾರ, ರಾಜಕುಮಾರ ಬರಸೂರೆ ಇತರರಿದ್ದರು.
Published on

ಭಾಲ್ಕಿ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಪ್ರೌಢಶಾಲಾ ಸಹ ಶಿಕ್ಷಕರ ಕಾನೂನು ಸಲಹೆಗಾರ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಪ್ರೌಢಶಾಲಾ ಸಹಶಿಕ್ಷಕರಿಗೆ ಕಲಿಕಾ ಆಸರೆ, ಮರುಸಿಂಚನ, ಎಫ್‌ಎಲ್‌ಎನ್, ಪ್ರತಿಬಿಂಬ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನಗಳಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತೊಂದರೆಯಾಗುತ್ತಲಿದೆ. ಕಾರಣ ಶಿಕ್ಷಕರ ಮೇಲಿನ ಒತ್ತಡ ತಗ್ಗಿಸಿ, ಗುಣಾತ್ಮಕ ಕಲಿಕೆಗೆ ಒತ್ತು ನೀಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ೩ ಹಂತದ ಪರೀಕ್ಷೆಗಳ ಬದಲು ಮೊದಲಿನಂತೆ ಎರಡು ಹಂತದ ಪರೀಕ್ಷೆಗಳನ್ನು ಆಯೋಜಿಸಬೇಕು. ಸಿಬಿಎಸ್‌ಇ, ಐಸಿಎಸ್‌ಸಿ ಪರೀಕ್ಷಾ ಫಲಿತಾಂಶ ಮಾದರಿಯಂತೆ ಆಂತರಿಕ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ವಿನ್ಯಾಸ ಸರಳೀಕರಣಗೊಳಿಸಬೇಕು. ಪರೀಕ್ಷಾ ಮೌಲ್ಯಮಾಪನ ಕಾರ್ಯ ಏಪ್ರಿಲ್ ೧೪ರೊಳಗಾಗಿ ಪೂರ್ಣಗೊಳಿಸಬೇಕು. ಖಾಸಗಿ ಅನುದಾನಿತ ಶಾಲೆಗಳಲ್ಲಿ ೨೦೧೬ ರಿಂದ ೨೦೨೦ರವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲು ಶೀಘ್ರದಲ್ಲಿ ಅನುಮತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮನವಿ ಪತ್ರ ಸ್ವೀಕರಿಸಿದರು.

ಪ್ರೌಢಶಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ಕಾರ್ಯದರ್ಶಿ ಬಾಲಾಜಿ ಕಾಂಬಳೆ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹಣಮಂತ ಕಾರಾಮುಂಗೆ, ಕಿರಣಕುಮಾರ ಭಾಟಸಾಂಗವಿ, ವಿಠಲರಾವ ಬಿರಾದಾರ, ರಾಜಕುಮಾರ ಬರಸೂರೆ, ಬಿಇಒ ಕಚೇರಿಯ ಶಿವಕುಮಾರ ಫುಲಾರಿ, ಮಲ್ಲಿಕಾರ್ಜುನ ಕನ್ನಾಳೆ, ಸಹದೇವ ಗೌಡಗಾವೆ, ಮುಖ್ಯಶಿಕ್ಷಕ ದಿಲೀಪ ಬಿರಾದಾರ, ಮಲ್ಲಿನಾಥ ಸಜ್ಜನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net