ಪ್ರೋತ್ಸಾಹಧನ ನೀಡಲು ಬಜೆಟ್‌ನಲ್ಲಿ ಹಣ ಮೀಸಲು

Shivakumar
Published on

ಮೈಸೂರು: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಸರ್ಕಾರಿ ಶಾಲೆ/ಕಾಲೇಜಿನ 50 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಮಾದರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಎಸ್ಸೆಸ್ಸೆಲ್ಸಿ, 25 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಪಾಲಿಕೆ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದೆ ಎಂದರು.
ಭಾರತದಲ್ಲಿ ಪ್ರಥಮ ತೃತೀಯಲಿಂಗಿ ಶೌಚಗೃಹವನ್ನು ಏಕೆ ಸ್ಥಾಪಿಸಬಾರದು ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚಿಸಲಾಗಿದೆ. ಅವರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಮತ್ತು ಎಲೆಕ್ಟ್ರಿಕ್ ಆಟೋಗಳನ್ನು ನೀಡುವ ಯೋಜನೆ ತರುವುದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಅವಕಾಶ ಪಾಲಿಕೆಯಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೇಯರ್, ಪಾಲಿಕೆಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿಲ್ಲ. ಆದರೆ ಖಾಸಗಿ ವ್ಯಕ್ತಿಗಳಿಗೆ ಮತ್ತು ಕಂಪನಿಗಳಿಗೆ ದತ್ತು ಪಡೆಯುವಂತೆ ಮನವಿ ಮಾಡುತ್ತೇವೆ. ಗಾಯತ್ರಿ ಟಾಕೀಸ್ ಬಳಿ ಇರುವ ಮಹಿಳಾ ಕಾಲೇಜಿನ ಕಟ್ಟಡ ಕಟ್ಟಲು 48 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

ಮೈಸೂರನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ಅದರತ್ತ ಕೆಲಸಗಳು ನಡೆಯುತ್ತಿವೆ. ಇದೀಗ ಶೇ.90ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ಡಾಂಬರೀಕರಣ ಕೆಲಸಗಳು ಮುಗಿದಿವೆ. ಸ್ವಚ್ಛ ನಗರಿಯಾಗಲು ಪೌರ ಬಂಧುಗಳ ಪಾತ್ರ ಬಹಳ ಪ್ರಮುಖವಾದದ್ದು, ಅವರಿಗೆ ಸಾಕಷ್ಟು ಯೋಜನೆಗಳು ಅಳವಡಿಸುವುದಾಗಿ ತಿಳಿಸಿದರು.

ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ, ಪ್ರಾಧ್ಯಾಪಕರಾದ ಡಾ. ಪುಟ್ಟಸ್ವಾಮಿ ಮತ್ತು ಡಾ.ಎನ್.ಮಮತಾ, ನಂದೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net