ಪ್ರೊ.ಲೋಕನಾಥ್ ಮೈಸೂರು ವಿವಿ ನೂತನ ಸಾರಥಿ

10
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಎನ್.ಕೆ.ಲೋಕನಾಥ್ ಅಧಿಕಾರ ವಹಿಸಿಕೊಂಡರು.


ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರೊ.ಎನ್.ಕೆ.ಲೋಕನಾಥ್ ಅವರನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 7.30ರಲ್ಲಿ ವಿವಿ ಕಾರ್ಯಸೌಧ ಕ್ರಾಫರ್ಡ್ ಹಾಲ್‌ಗೆ ಭೇಟಿ ನೀಡಿ ಅಧಿಕಾರ ಸ್ವೀಕರಿಸಿದರು.


ಪ್ರಭಾರ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಅವರು ಪ್ರೊ.ಎನ್.ಕೆ.ಲೋಕನಾಥ್‌ಗೆ ಅಧಿಕಾರ ಹಸ್ತಾಂತರ ಮಾಡಿದರು. ನೂತನ ವಿಸಿ ಅಧಿಕಾರಾವಧಿ ಮುಂದಿನ ನಾಲ್ಕು ವರ್ಷಗಳವರೆಗೆ ಇರಲಿದೆ.


ಮೈಸೂರು ವಿ.ವಿ.ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಲೋಕನಾಥ್ ಅವರು ಯೋಜನಾ ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿದ್ದರು.


ಕುಲಪತಿ ಹುದ್ದೆಗೆ ಸಲ್ಲಿಕೆಯಾಗಿದ್ದ 71 ಅರ್ಜಿಗಳನ್ನು ಬೆಂಗಳೂರಿನ ಸಿಎಂಆರ್ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್. ಶಿವಕುಮಾರ್ ಅಧ್ಯಕ್ಷತೆಯ ಶೋಧನಾ ಸಮಿತಿ ಪರಿಶೀಲನೆ ಮಾಡಿತ್ತು. ಇದರಲ್ಲಿ ಮೈಸೂರು ವಿ.ವಿ. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಪ್ರೊ.ಎನ್.ಆರ್.ಲೋಕನಾಥ್ ಮತ್ತು ಹೈದರಾಬಾದ್ ವಿ.ವಿ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಸಾಹಿತಿ ಯು.ಆರ್.ಅನಂತಮೂರ್ತಿ ಪುತ್ರ ಡಾ.ಶರತ್ ಅನಂತಮೂರ್ತಿ ಹೆಸರನ್ನು ಈ ಶಿಫಾರಸು ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ರಾಜ್ಯ ಸರ್ಕಾರ ರಾಜಭವನಕ್ಕೆ ಕಳುಹಿಸಿತ್ತು.


ಪ್ರೊ.ಜಿ.ಹೇಮಂತ್‌ಕುಮಾರ್ ಅವರ 4 ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೈಸೂರು ವಿವಿ ಕುಲಪತಿ ಸ್ಥಾನ ಕಳೆದ ನ. 15ರಿಂದ ತೆರವಾಗಿತ್ತು. ಪ್ರಭಾರ ಕುಲಪತಿಯಾಗಿ ವಾಣಿಜ್ಯ ವಿಭಾಗದ ಡೀನ್ ಪ್ರೊ.ಎಚ್.ರಾಜಶೇಖರ್ ಮಾ.15ರ ವರೆಗೆ ಕಾರ್ಯನಿರ್ವಹಿಸಿದ್ದರು. ಬಳಿಕ ಕಲಾ ನಿಕಾಯದ ಡೀನ್ ಆಗಿರುವ ಪ್ರೊ.ಮುಜಾಫರ್ ಅಸ್ಸಾದಿ ಪ್ರಭಾರ ಕುಲಪತಿಯಾಗಿದ್ದರು.


ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆ ಮಾ. 24ರಂದು ಬೆಳಗ್ಗೆ 11.30ಕ್ಕೆ ನಿಗದಿಯಾಗಿದೆ. ನೂತನ ವಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net