ಪ್ರೊ.ಮಾಧವ್ ಗಾಡ್ಗಿಲ್ ವರದಿ ಜಾರಿಯಾಗಲಿ:ಜಿಲ್ಲಾ ಪರಿಸರ ಕಾರ್ಯಕರ್ತರ ಸಂಘಟನೆ ಮನವಿ

ಪ್ರೊ.ಮಾಧವ್ ಗಾಡ್ಗಿಲ್ ವರದಿ ಜಾರಿಯಾಗಲಿ:ಜಿಲ್ಲಾ ಪರಿಸರ ಕಾರ್ಯಕರ್ತರ ಸಂಘಟನೆ ಮನವಿ
Published on

ಹಾಸನ: ಪ್ರೊ. ಮಾಧವ್ ಗಾಡ್ಗಿಲ್ ಸಮಿತಿಯು 2011ರಲ್ಲಿ ಸಲ್ಲಿಸಿದ ವರದಿಯನ್ನು ಜಾರಿಗೆ ತರುವ ಮೂಲಕ ಪಶ್ಚಿಮ ಘಟ್ಟವನ್ನು ಸಂರಕ್ಷಣೆ ಮಾಡಬೇಕು ಎಂದು ಪರಿಸರಕ್ಕಾಗಿ ನಾವು ಜಿಲ್ಲಾ ಪರಿಸರ ಕಾರ್ಯಕರ್ತರ ಸಂಘಟನೆಯ ವತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈಚೆಗೆ ಕೇರಳದಲ್ಲಿ ಮತ್ತು ನಮ್ಮ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ನೂರಾರು ಜನರ ಬಾಳು ಬೀದಿಗೆ ಬಂದಿತು. ಆಸ್ತಿ-ಪಾಸ್ತಿ ಕೊಚ್ಚಿ ಹೋಗಿ, ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದಕ್ಕೆ ಮುಖ್ಯ ಕಾರಣ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ. ಪಶ್ಚಿಮ ಘಟ್ಟದ ಮಹತ್ವವನ್ನು ಅರಿತು ಪ್ರೊಫೆಸರ್ ಮಾಧವ್ ಗಾಡ್ಗಿಲ್ ಸಮಿತಿಯು 2011ರಲ್ಲಿ ಸಲ್ಲಿಸಿದ ವರದಿಯಲ್ಲಿ ಈ ಪ್ರದೇಶಕ್ಕೆ ಹಾನಿ ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ನಡೆಯದಂತೆ ಕಟ್ಟುನಿಟ್ಟಾಗಿ ತಡೆಯಬೇಕೆಂದು ಶಿಫಾರಸು ಮಾಡಿತ್ತು. ಹೀಗಾಗಿ ಪಶ್ಚಿಮ ಘಟ್ಟ ಉಳಿವಿಗೆ ಮಾಧವ್ ಗಾಡ್ಗಿಲ್ ವರದಿಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲು ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಖಜಾಂಚಿ ಎಂ.ಬಿ. ಗಿರಿಜಾಂಬಿಕಾ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಟ್ರಸ್ಟಿಗಳಾದ ಶಿವಶಂಕರಪ್ಪ, ಪುರುಷೋತ್ತಮ್, ಡಾ.ಮಂಜುನಾಥ್, ಚಾ.ನ.ಅಶೋಕ್, ಮಲೆನಾಡು ಹೋರಾಟ ಸಮಿತಿಯ ಸಂಚಾಲಕ ಕಿಶೋರ್ ಕುಮಾರ್, ಆಡಿಟರ್ ದಿನೇಶ್ ಕುಮಾರ್, ಸಚಿನ್, ಸೈಯದ್ ತಾಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net