

ಮೈಸೂರು: ಜಿ.ಎಚ್.ನಾಯಕ ಅವರು ಕನ್ನಡ ಸಾಹಿತ್ಯದಷ್ಟೇ ಇಂಗ್ಲಿಷ್ ಸಾಹಿತ್ಯವನ್ನೂ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದರು ಎಂದು ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹಿರಿಯ ವಿಮರ್ಶಕ ಪ್ರೊ.ಜಿ.ಎಚ್.ನಾಯಕ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ವಿಷಯಕ್ಕೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ವಿವಿಯ ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಕೊಡಬೇಕೋ ಅಷ್ಟನ್ನು ನೀಡುತ್ತಿದ್ದರು. ಅವರಿಗೆ ಸಮತೋಲನದ ದೃಷ್ಟಿಕೋನ ಇತ್ತು. ಅವರ ಪಾಠ ವೈಚಾರಿಕ ನೆಲೆಗಟ್ಟಿನಲ್ಲಿ ಇರುತ್ತಿತ್ತು ಎಂದರು.
ಜಿ.ಎಚ್. ನಾಯಕ ಅವರು ವೈಯಕ್ತಿಕವಾಗಿ ಲಾಭ-ನಷ್ಟ ಗಮನಿಸದ ವ್ಯಕ್ತಿಯಾಗಿದ್ದರು. ವಿಶ್ವವಿದ್ಯಾಲಯದ ರಾಜಕಾರಣದ ಜತೆಗೆ ರಾಜಿ ಮಾಡಿಕೊಂಡಿದ್ದಲ್ಲಿ ಎಂದೋ ಉನ್ನತ ಸ್ಥಾನಕ್ಕೆ ಹೋಗಬಹುದಾಗಿತ್ತು. ಆದರೆ ಆ ರೀತಿ ಮಾಡಲಿಲ್ಲ. ಶಿಸ್ತುಬದ್ಧ ಜೀವನ ಅವರದಾಗಿತ್ತು ಎಂದರು.
ಮನುಷ್ಯ ಸಂಬಂಧಗಳಿಗೆ ಹೆಚ್ಚು ಗಮನ ನೀಡುತ್ತಿದ್ದರು. ಅನೇಕ ಚಳವಳಿಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಗೋಕಾಕ್ ಚಳವಳಿಯಲ್ಲಿ ಜೈಲಿಗೆ ಹೋಗಿದ್ದರು ಎಂದು ಸ್ಮರಿಸಿದರು.
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್, ರಂಗಕರ್ಮಿ ರಾಜಶೇಖರ್ ಕದಂಬ ಹಾಜರಿದ್ದರು.