ಪ್ರೊ.ಕೆ.ಎಸ್.ಭಗವಾನ್ ಕ್ಷಮೆಯಾಚನೆಗೆ ಆಗ್ರಹ

ಪ್ರೊ.ಕೆ.ಎಸ್.ಭಗವಾನ್ ಕ್ಷಮೆಯಾಚನೆಗೆ ಆಗ್ರಹ
Published on

ಹಾಸನ : ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್. ಭಗವಾನ್ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಳಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪುಟ್ಟಸ್ವಾಮಿಗೌಡ ಎಚ್ಚರಿಸಿದರು.

ನಿವೃತ್ತ ಪ್ರಾಧ್ಯಾಪಕ ಭಗವಾನ್ ಹಲವಾರು ಬಾರಿ ಹಿಂದು ಧರ್ಮ ಸೇರಿದಂತೆ ವಿವಿಧ ವಿಚಾರಗಳಲ್ಲಿ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಈಗ ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಒಕ್ಕಲಿಗ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಆದ್ದರಿಂದ ನಮ್ಮ ಸಮುದಾಯದ ಪೀಠಾಧ್ಯಕ್ಷರಾದ ನಿರ್ಮಾಲಾನಂದನಾಥ ಸ್ವಾಮೀಜಿ ಅವರಿಗೆ ಕ್ಷಮಾಪಣಾ ಪತ್ರ ಹಾಗೂ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತಮ್ಮ ಜನಪ್ರಿಯತೆಗಾಗಿ ನಾನಾ ಸಮುದಾಯಗಳ ವ್ಯಕ್ತಿಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಪದೇಪದೆ ನೀಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಮುಂದಾದರೂ ಇಂತಹ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಜಿಲ್ಲಾಧ್ಯಕ್ಷ ಸುರೇಶ್, ಹರೀಶ್ ಗೌಡ, ಮಂಜುನಾಥ್, ತಿಮ್ಮೇಗೌಡ, ನಳಿನಾಕ್ಷಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net