ಪ್ರೊ.ಎಂ.ಪುಟ್ಟಸ್ವಾಮಿಗೌಡರಿಗೆ ಬೀಳ್ಕೊಡುಗೆ

4KMD-1
Published on

ಕೆ.ಎಂ.ದೊಡ್ಡಿ : ವಯೋನಿವೃತ್ತಿ ಹೊಂದಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪುಟ್ಟಸ್ವಾಮಿಗೌಡರಿಗೆಕೆ.ಎಂ.ದೊಡ್ಡಿ ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ನಂತರ ಮಾತನಾಡಿದ ಪುಟ್ಟಸ್ವಾಮಿಗೌಡ, ನನ್ನ ಶೈಕ್ಷಣಿಕ ವೃತ್ತಿ ಬದುಕಿಗೆ ಮುನ್ನುಡಿ ಬರೆದವರು ಮಾಜಿ ಸಂಸದ ದಿ. ಜಿ.ಮಾದೇಗೌಡ ಎಂದು ಸ್ಮರಿಸಿದರು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದೇಗೌಡ ದಾರಿ ದೀಪವಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿ ಕೊಟ್ಟ ಅಕ್ಷರ ಬ್ರಹ್ಮ ಅವರು ಎಂದು ಬಣ್ಣಿಸಿದರು. ಅವರು ಮತ್ತು ಸಂಸ್ಥೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿವರ್ಹಿಸಿದ ಧನ್ಯತೆ ನನಗೆ ಇದೆ ಎಂದು ಅವರು ಭಾವುಕರಾಗಿ ನುಡಿದರು.

ಭಾರತೀ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಡಿ.ಹಳ್ಳಿ ಸಿದ್ದೇಗೌಡ ಮಾತನಾಡಿ, ಪುಟ್ಟಸ್ವಾಮಿಗೌಡರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು ಎಂದು ಶ್ಲಾಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಂಸದ ದಿ. ಮಾದೇ ಗೌಡರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಭಾರತೀ ವಿದ್ಯಾಸಂಸ್ಥೆ, ಅಧ್ಯಾಪಕರ ಸಂಘ, ವಿವಿಧ ವಿಭಾಗಗಳ ಮುಖ್ಯಸ್ಥರು, ಹಿರಿಯ ವಿದ್ಯಾರ್ಥಿಗಳ ಬಳಗ, ಹಿರಿಯ ವಿದ್ಯಾರ್ಥಿಗಳು ಪ್ರೊ.ಪುಟ್ಟಸ್ವಾಮಿಗೌಡ ಹಾಗೂ ಪತ್ನಿ ಮಂಜುಳಾ ಅವರನ್ನು ಗೌರವಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿದರು. ಬಿಇಟಿ ಟ್ರಸ್ಟಿಗಳಾದ ಕಾರಕಹಳ್ಳಿ ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಪ್ರಾಂಶುಪಾಲರಾದ ಡಾ. ಎಂ.ಎಸ್.ಮಹದೇವಸ್ವಾಮಿ, ಸಿ.ವಿ. ಮಲ್ಲಿಕಾರ್ಜುನ, ಗ್ರಂಥಪಾಲಕ ಎ.ಎಸ್. ಸಂಜೀವ್ ಸಿದ್ದರಾಮೇಗೌಡ, ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್.ನಾಗರಾಜು, ಬಿ.ಕೆ.ಕೃಷ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net