ಪ್ರೇರಣಾ ವಿದ್ಯಾಸಂಸ್ಥೆ ಮಕ್ಕಳಿಗೆ ಅಕ್ಷರಾಭ್ಯಾಸ

20rajesh5
Published on

ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದಲ್ಲಿರುವ ಪ್ರೇರಣಾ ವಿದ್ಯಾಸಂಸ್ಥೆಯ ವತಿಯಿಂದ ಹರದನಹಳ್ಳಿ ಶ್ರೀ ದಿವ್ಯ ಲಿಂಗೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮಕ್ಕಳಿಗೆ ಶುಕ್ರವಾರ ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮ ನಡೆಯಿತು.

ಪ್ರೇರಣಾ ವಿದ್ಯಾ ಸಂಸ್ಥೆಯ ಶಾಲೆಗೆ ಪ್ರಥಮ ದಿನ ಆಗಮಿಸುತ್ತಿರುವ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಪಾಲಕರೊಟ್ಟಿಗೆ ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆಯನ್ನು ಪ್ರಧಾನ ಅರ್ಚಕ ವೇಣುಗೋಪಾಲಸ್ವಾಮಿ ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ವೇಣುಗೋಪಾಲಸ್ವಾಮಿ ಮಾತನಾಡಿ, ಮಕ್ಕಳಿಗೆ ದೇವರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸುವುದು ಹಾಗೂ ಸರಸ್ವತಿ ಪೂಜೆಯೊಂದಿಗೆ ಪ್ರಥಮ ತರಗತಿಯನ್ನು ಆರಂಭಿಸುವುದು ಶುಭ ಸಂಕೇತವಾಗಿದೆ. ಮಕ್ಕಳಿಗೆ ಪ್ರಥಮವಾಗಿ ಅಕ್ಷರವನ್ನು ಕಲಿಸಿ, ಗುರುಕುಲಕ್ಕೆ ಕಳುಹಿಸುವುದು ಸಂಪ್ರಾದಾಯ. ಅದರಂತೆ ಮಕ್ಕಳ ಆಶೋತ್ತರಗಳು ಈಡೇರಲಿ ಎಂದು ಶುಭ ಕೋರಿದರು.

ಪ್ರೇರಣಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಎಲ್‌ಕೆಜಿ ಮತ್ತು ಯುಕೆಜಿಗೆ ದಾಖಲಾಗಿರುವ 40 ಕ್ಕು ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗಿದೆ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಸುಂದರ ಪರಿಸರದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮಹೇಶ್ ಕುಮಾರ್, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net