

ಕೊಳ್ಳೇಗಾಲ: ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಜೀವನ ನಾಶ ಮಾಡಿಕೊಳ್ಳಬೇಡಿ, ಗುರು-ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ ಎಂದು ಪಟ್ಟಣ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಉಮಾವತಿ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಬಾಲಕಿಯರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವೆಗಳ ಸಮಿತಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಬಾಲ್ಯವಿವಾಹ ತಡೆಗಟ್ಟುವಿಕೆ, ಪೋಕ್ಸೋ ಕಾಯ್ದೆ ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗುವುದನ್ನು ತಡೆಗಟ್ಟುವ ಕುರಿತು ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳನ್ನು ಅತಿಯಾದ ಪ್ರೀತಿ ಕೊಟ್ಟು ಬೆಳೆಸಿರುತ್ತಾರೆ. ಹೀಗಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿದರೆ ಏನಾದರೂ ಸಾಧನೆ ಮಾಡಬಹುದು. ಪ್ರೀತಿ, ಪ್ರೇಮ ಎಂಬ ಸುಳಿಗೆ ಬಿದ್ದರೆ, ಇತ್ತ ಕುಟುಂಬವನ್ನು ನೋವಿಗೆ ದೂಕಿದಂತೆ ಆಗುತ್ತದೆ. ನಿಮ್ಮ ಜೀವನವೂ ನಾಶವಾಗುತ್ತದೆ. ಮೊದಲು ಜೀವನ ಕಟ್ಟಿಕೊಳ್ಳಲು ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಬಾಲ್ಯವಿವಾಹ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಹೆಣ್ಣು ಮಕ್ಕಳಿಗೆ 18 ವಯಸ್ಸು ತುಂಬುವ ಮುನ್ನ ಮದುವೆ ಮಾಡಬಾರದು. ಇದರಿಂದ ಮಕ್ಕಳ ಕನಸುಗಳನ್ನು ನಾಶ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಪಾಲಕರು ಅರಿವಿನ ಕೊರತೆಯಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರ ಮೂಲಕ ಅವರ ಬದುಕನ್ನು ನರಕ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಈ ಹಿನ್ನೆಲೆ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಮುಂದಾಗಬೇಕಿದೆ. ಪೋಕ್ಸೋ ಕಾಯ್ದೆ ಅರಿವು ಹಾಗೂ ಮಾದಕ ವ್ಯಸನಗಳ ತಡೆಗಟ್ಟುವಲ್ಲಿ ವಿದ್ಯಾರ್ಥಿನಿಯರು ಜಾಗೃತರಾಗಬೇಕೆಂದು ಸಲಹೆ ನೀಡಿದರು.
ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಕಾನ್‌ಸ್ಟೆಬಲ್ ಭಾಗ್ಯಾ ಇತರರು ಇದ್ದರು.