

ಚಿತ್ರದುರ್ಗ: ವೃತ್ತಿ ರಂಗಭೂಮಿಯಲ್ಲಿರುವ ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗ ತಂಡಗಳು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ದಾವಣಗೆರೆ ಶ್ರೀಗುರು ವಾದ್ಯವೃಂದ, ಸಂಚಾರಿ ಕೆಬಿಆರ್ ಡ್ರಾಮಾ ಕಂಪನಿ ಹಾಗೂ ಬೆಳಗಾವಿ ಕನ್ನಡ ಕಲಾವಿದರ ಸಂಘದ ಆಶ್ರಯದಲ್ಲಿ ಮಂಗಳವಾರ ರಾತ್ರಿ ನಗರದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಾಧ್ವಿ ಸರಸ್ವತಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೇಕ್ಷಕರನ್ನು ಆಕರ್ಷಿಸುವ ಗುಣವನ್ನು ಹವ್ಯಾಸಿ ರಂಗ ತಂಡಗಳು ಅಳವಡಿಸಿಕೊಳ್ಳಬೇಕು. ಅದೇ ರೀತಿಯಲ್ಲಿ ಹವ್ಯಾಸಿ ರಂಗ ತಂಡಗಳಲ್ಲಿರುವ ಶಿಸ್ತನ್ನು ವೃತ್ತಿ ರಂಗ ತಂಡಗಳು ಅಳವಡಿಸಿಕೊಳ್ಳಬೇಕು. ವೃತ್ತಿ ಮತ್ತು ಹವ್ಯಾಸಿ ರಂಗ ತಂಡಗಳು ಒಗ್ಗೂಡಿದರೆ ನಾಟಕ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ ಎಂದರು.
ಒಂದು ಕಾಲದಲ್ಲಿ ವೃತ್ತಿ ರಂಗಭೂಮಿ ಕಂಪನಿ ಕ್ಯಾಂಪ್ ಹಾಕಿದರೆ ಜನರು ಸಾಲುಗಟ್ಟಿ ನಾಟಕ ನೋಡುತ್ತಿದ್ದರು. ನಾಟಕದಲ್ಲಿ ಸಾಮಾಜಿಕ ಸಂದೇಶವಿರುತ್ತಿತ್ತು. ಸಮಸ್ಯೆಗಳನ್ನು ಎದುರಿಸುವ ಎಚ್ಚರಿಕೆ ಇರುತಿತ್ತು. ಆದರಿಂದು ವೃತ್ತಿ ರಂಗಭೂಮಿ ಹೊರಳು ಹಾದಿಯಲ್ಲಿದೆ. ವೃತ್ತಿ ರಂಗಭೂಮಿ ನಾಟಕಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಕಿವಿಗಡಚಿಕ್ಕುವ ಸಂಗೀತ, ವಿಚಿತ್ರ ನೃತ್ಯ ಹೆಚ್ಚುತ್ತಿದ್ದು, ಸಾಮಾಜಿಕ ಸಂದೇಶವುಳ್ಳ ನಾಟಕಗಳನ್ನು ಜನ ನೋಡುವುದಿಲ್ಲ ಎಂಬಂಥ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಸಾಣೇಹಳ್ಳಿಯಲ್ಲಿ ಶಿವಸಂಚಾರ ರಂಗತಂಡವನ್ನು ನಾವು ಆರಂಭಿಸಿದಾಗ ಹವ್ಯಾಸಿ ನಾಟಕಗಳನ್ನು ಯಾರು ನೋಡುತ್ತಾರೆಂದು ಕೆಲವರು ಪ್ರಶ್ನಿಸಿದರು. ಆದರೆ, ಈ ನಾಟಕಗಳ ಯಶಸ್ಸಿನ ನಂತರ ಇಂಥ ಪರಿಣಾಮಕಾರಿ ನಾಟಕಗಳ ಅವಶ್ಯವಿದೆ ಎಂಬ ಅರಿವು ಸಮಾಜದಲ್ಲಿ ಜಾಗೃತವಾಯಿತು ಎಂದರು.
ಸಾಣೇಹಳ್ಳಿಯಲ್ಲಿ ಪ್ರತಿ ವರ್ಷ ವೃತ್ತಿ ರಂಗಭೂಮಿ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದು, ಹವ್ಯಾಸಿ ರಂಗ ನಟರೂ ಸಮರ್ಥವಾಗಿ ಅಭಿನಯಿಸುತ್ತಿದ್ದಾರೆ. ವೃತ್ತಿ ರಂಗಭೂಮಿ ಸದಾ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿವೆ. ವೃತ್ತಿರಂಗ ಕಂಪನಿಗಳನ್ನು ನಡೆಸುವುದೇ ಕಷ್ಟವಾಗಿದೆ. ಕಂಪನಿಗಳ ಮಾಲೀಕರು ಸಾಕಷ್ಟು ಸಾಲ ಮಾಡಿ ಮುನ್ನಡೆಸುತ್ತಾ ಬರುತ್ತಿದ್ದಾರೆ. ಸರ್ಕಾರ ಇಂಥ ರಂಗ ತಂಡಗಳ ಪೋಷಣೆಗೆ ಸಹಕಾರ ನೀಡಬೇಕು. ಕಂಪನಿ ನಾಟಕ ಕಲೆಯನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕೆಬಿಆರ್ ಡ್ರಾಮ ಕಂಪನಿ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ, ಕಲಾವಿದರ ಸಂಘದ ಅಧ್ಯಕ್ಷ ಕೆ.ಗಣೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಒ.ಮುರಾರ್ಜಿ ಇತರರಿದ್ದರು.
*ಕೋಟ್
ವೃತ್ತಿ ರಂಗಭೂಮಿ ನಾಟಕಗಳನ್ನು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದವು. ಪೌರಾಣಿಕ ನಾಟಕಗಳನ್ನು ಜನರು ರಾತ್ರಿಯಿಂದ ಬೆಳಗ್ಗೆವರೆಗೂ ನೋಡುತ್ತಿದ್ದರು. ಆದರೆ, ಬದಲಾದ ಕಾಲದಲ್ಲಿ ಹವ್ಯಾಸಿ ರಂಗ ತಂಡಗಳ ನಾಟಕಗಳಿಗೆ ಆದ್ಯತೆ ಸಿಗುತ್ತಿದೆ.
ವೈ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ, ವಕೀಲರ ಸಂಘ