

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಶರನ್ನವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ರೇಣುಕನಗರದ ವಿಘ್ನೇಶ್ವರ ಕಲಾಬಳಗದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಕೆರೆ ಚೌಡೇಶ್ವರಿ ಸರ್ಕಲ್ ನಾಟಕ ಪ್ರೇಕ್ಷಕರ ಮನಗೆದ್ದಿತು.
ಬಿ.ಜಗದೀಶ್ಚಂದ್ರ ನಿರ್ದೇಶನದಲ್ಲಿ ಜಗನ್ಮಾತೆ ಚೌಡೇಶ್ವರಿಗೆ ದೇವಲೋಕದಿಂದ ಭೂಮಿಗೆ ಬಂದ ಬಗ್ಗೆ, ಬಾಳೆಹೊನ್ನೂರಿನ ಕೆರೆ ಚೌಡೇಶ್ವರಿ ದೇವಿಯು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜತೆ ಬಂದು ಬಾಳೆಹೊನ್ನೂರಿನಲ್ಲಿ ನೆಲೆ ನಿಂತ ಸನ್ನಿವೇಶ, ಪ್ರಸ್ತುತ ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ರಚನೆಗೊಂಡ ಕೆರೆ ಚೌಡೇಶ್ವರಿ ನಾಟಕದಲ್ಲಿ ವಿವಿಧ ದೃಶ್ಯಗಳನ್ನು ನೋಡುಗರ ಮನಮುಟ್ಟುವಂತೆ ಪ್ರದರ್ಶಿಸಲಾಯಿತು.
ಪ್ರಮುಖವಾಗಿ ಮಲೆನಾಡಿನ ಪಟೇಲರು ಹಾಗೂ ಅವರ ಶಿಷ್ಯ ಸಿದ್ದನ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಗೋಪೂಜೆ ಹಾಗೂ ಗೋದಾನದ ಮಹತ್ವದ ಕುರಿತು ಜನರ ಮನಸ್ಸಿಗೆ ತಲುಪುವಂತೆ ನಾಟಕದ ದೃಶ್ಯಗಳಲ್ಲಿ ತೋರಿಸಲಾಯಿತು. ಪ್ರಸ್ತುತ ಧರ್ಮಸ್ಥಳ ಪ್ರಕರಣದಲ್ಲಿ ದೇವಾಲಯದ ಮೇಲೆ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶಗಳ ಕುರಿತು ನೈಜರೂಪದಲ್ಲಿ ಬರುವಂತೆ ಹಾಗೂ ಹಿಂದು ದೇವಾಲಯಗಳ ಮೇಲಿನ ಇಲ್ಲಸಲ್ಲದ ಆರೋಪಗಳ ಕುರಿತು ಜನರು ಎಚ್ಚರಿಕೆ ವಹಿಸುವ ಮಾರ್ಗದರ್ಶನ ನೀಡುವ ಕುರಿತು ಪ್ರದರ್ಶಿಸಲಾಯಿತು.
ಮಲೆನಾಡಿನ ಪಟೇಲರು ಮತ್ತು ಸಿದ್ದನ ಸಂಭಾಷಣೆಗಳ ದೃಶ್ಯದಲ್ಲಿ ಪ್ರಮುಖವಾಗಿ ಮಲೆನಾಡಿ ಅಡಕೆ, ಕಾಫಿ ತೋಟಗಳಲ್ಲಿ ಕಾರ್ಮಿಕರು ಕೆಲಸಕ್ಕೆ ದೊರೆಯದಿರುವುದು, ಕಾರ್ಮಿಕರು ಕೆಲಸ ಮಾಡುವುದು, ಪ್ರಸ್ತುತ ಸನ್ನಿವೇಶಗಳಲ್ಲಿ ಮಹಿಳೆಯರು ಧಾರಾವಾಹಿಗಳಿಗೆ ಹೆಚ್ಚು ಮಾರು ಹೋಗಿರುವ ಬಗ್ಗೆ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಇತ್ತೀಚೆಗೆ ನಡೆದ ಧರ್ಮಸ್ಥಳ ಪ್ರಕರಣದ ಪಾತ್ರಗಳನ್ನು ಮುಂದಿಟ್ಟುಕೊಂಡು ನಾಟಕದ ದೃಶ್ಯಗಳನ್ನು ರಚಿಸಿದ್ದು, ಅಲ್ಲಿನ ಸನ್ನಿವೇಶಗಳಿಗೆ ಹೋಲಿಕೆ ಮೂಡುವಂತಿದ್ದ ಕೆಲವು ದೃಶ್ಯಗಳು ಗಮನಸೆಳೆದವು.
ಅಂತಿಮ ದೃಶ್ಯದಲ್ಲಿ ಬಾಳೆಹೊನ್ನೂರಿನಲ್ಲಿ ಕೆರೆ ಚೌಡೇಶ್ವರಿ ನೆಲೆಗೊಂಡು ಪ್ರತಿಷ್ಠಾಪನೆಗೊಳ್ಳುವುದನ್ನು ಹಾಗೂ ದೇವಾಲಯ ನಿರ್ಮಾಣಕ್ಕೆ ತೊಂದರೆ ನೀಡಿದವರಿಗೆ ಉಂಟಾಗುವ ಶಾಸ್ತಿ ಕುರಿತು ವಿಶೇಷ ಮಾದರಿಯಲ್ಲಿ ಪ್ರದರ್ಶಿಸಲಾಯಿತು.
ನಾಟಕದಲ್ಲಿ ಆರ್.ಡಿ.ಮಹೇಂದ್ರ, ಬಿ.ಜಗದೀಶ್ಚಂದ್ರ, ಸಿ.ಎಸ್.ಮಹೇಶ್ಚಂದ್ರ, ರವೀಂದ್ರ ಆಚಾರ್ಯ, ಅರುಣ್‌ಕುಮಾರ್, ಪಿ.ಕೆ.ಪ್ರಕಾಶ್ ಬನ್ನೂರು, ಸಚಿನ್‌ಕುಮಾರ್, ಚಂದನಾ ಪ್ರಸಾದ್, ಭೂಮಿಕಾ ಆಚಾರ್ಯ, ದೀಕ್ಷಿತಾ ಶೆಟ್ಟಿ, ಮಂಜು ಹೊಳೆಬಾಗಿಲು, ನಿಶ್ಚಿತಾ, ಭುವನ್, ಸಿರಿ ಆರಾಧ್ಯ, ಇಂದುಜಾ, ಇಶಾನ್, ಕಿಶನ್, ಶಿವಗಣೇಶ್, ತೇಜಸ್ ಬನ್ನೂರು, ಶೇಖರ್, ಕಾರ್ತಿಕ್, ಪ್ರತೀಕ್, ಬಿ.ಎಸ್.ಅಗಸ್ತ್ಯ, ಸಾಮ್ರಾಟ್, ತನುಶ್ರೀ, ಪ್ರಣವ್, ಸಂದೀಪ್ ಬಣ್ಣ ಹಚ್ಚಿದರು.
ರಂಗಸಜ್ಜಿಕೆಯಲ್ಲಿ ಪ್ರಭಾಕರ್ ಆಚಾರ್ಯ, ಮಂಜುನಾಥ್ ಆಚಾರ್ಯ, ಪ್ರೇಮ್‌ಕುಮಾರ್, ಸಂದೀಪ್ ಶೆಟ್ಟಿ, ಗುರುಪ್ರಸಾದ್, ವಸ್ತ್ರ ವಿನ್ಯಾಸ ಹಾಗೂ ಪ್ರಸಾದನ ವಿಭಾಗದಲ್ಲಿ ಭಾಗ್ಯಲಕ್ಷ್ಮೀ ಜಗದೀಶ್, ಉಮಾ ಮಹೇಂದ್ರ, ಸ್ಮಿತಾ ಮಹೇಶ್, ಮಾಲಾ ರವೀಂದ್ರ, ಮಾನಸಾ ಮಂಜುನಾಥ್, ಸುಮನಾ ಸಚಿನ್ ಸಹಕರಿಸಿದರು.